ವಕ್ಫ್ ಬೋರ್ಡ್ ಕಾಯ್ದೆ ವಿರುದ್ಧ ಬಿಜೆಪಿ ಪ್ರತಿಭಟನೆ

waqf
Published on

ಕುಶಾಲನಗರ:

ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕುಶಾಲನಗರದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು. ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸÀರ್ಕಾರ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಧಿಕ್ಕಾರ ಕೂಗಿದರು.

ರೈತರು, ಬಡವರು ಹಾಗೂ ಮಠಗಳ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಹುನ್ನಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಕ್ಫ್ ಕಾಯ್ದೆ ವಿರೋಧಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ವಕ್ಫ್ ಬೋರ್ಡ್ ಸಚಿವ ರಾಜ್ಯದಲ್ಲಿ ಜಿನ್ನಾ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕರ್ನಾಟಕ ಒಡೆಯುವ ಕೆಲಸವನ್ನು ಜಮೀರ್ ಅಹಮ್ಮದ್ ಮಾಡುತ್ತಿದ್ದಾರೆ. ಬಡವರ, ರೈತರ ಹಾಗೂ ಮಠಗಳ ಜಮೀನುಗಳ ದಾಖಲೆಯಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಬೆಂಗಳೂರಿನಲ್ಲಿರುವ ಐಷಾರಾಮಿ ಹೋಟೆಲ್‌ಗಳನ್ನು ಬಿಡಿಸಿ ಸರ್ಕಾರಕ್ಕೆ ಕೊಡುವ ಕೆಲಸ ಮಾಡಲಿ. ಮಡಿಕೇರಿಯಲ್ಲಿ 15 ಜನರಿಗೆ ನೋಟಿಸ್ ನೀಡಲಾಗಿದೆ. ಸೋಮವಾರಪೇಟೆಯಲ್ಲಿ 11 ಎಕರೆ ವಕ್ಫ್ ಹೆಸರಿಗೆ ಆರ್.ಟಿ.ಸಿಯಲ್ಲಿ ದಾಖಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ವಕ್ಫ್ ಬೋರ್ಡ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಂವಿಧಾನದ ಅಡಿಯಲ್ಲಿರುವ ಸರ್ಕಾರವೊ ಅಥವಾ ತುಘಲಕ್ ಸರ್ಕಾರವೊ ಎಂದು ಪ್ರಶ್ನಿಸಬೇಕಾಗಿದೆ. ರಾಜ್ಯದಲ್ಲಿ 1.5 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ಗೆ ಸೇರಿದೆ ಎಂದು ಹೇಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿರುವ ವಕ್ಫ್ ಜಾಗವನ್ನು ಬಿಡಿಸಲಿ. ಸಿಎಂ ಸಿದ್ದರಾಮಯ್ಯ ನೋಟಿಸ್ ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಶಾಶ್ವತವಾಗಿ ವಾಪಸು ಪಡೆಯಲಿ. ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡುವುದು, ಬೆದರಿಕೆ ಹಾಕುವುದನ್ನು ಬಿಜೆಪಿ ಸಹಿಸುವುದಿಲ್ಲ ಇದರ ವಿರುದ್ಧ ಉಗ್ರ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಎA. ಚರಣ್, ಕಾರ್ಯದರ್ಶಿ ಎಚ್.ಎಂ. ಮಧುಸೂದನ್, ಮಂಡಲ ಅಧ್ಯಕ್ಷ ಗೌತಮ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ನವನೀತ್, ತಾಲೂಕು ಘಟಕದ ಉಪಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಯುವ ಮೋರ್ಚ್ ಅಧ್ಯಕ್ಷ ರಮನಾಥನ್, ಪ್ರಧಾನ ಕಾರ್ಯದರ್ಶಿ ಸಚಿನ್, ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ, ಮುಖಂಡರಾದ ಜಿ.ಎಲ್. ನಾಗರಾಜು, ಎಂ.ವಿ.ನಾರಾಯಣ, ಎಂ.ಎನ್. ಕುಮಾರಪ್ಪ, ಎಂ.ಎಸ್.ಚಿಣ್ಣಪ್ಪ, ಶಿವಕುಮಾರ್, ಗಣಪತಿ, ಕೆ.ವರದ, ಕೆ.ಜಿ. ಮನು, ಮಹೇಶ್, ಪ್ರವೀಣ್, ವೈಶಾಖ್, ಮಣಿ, ಸುಮನ್, ಶಶಿಕುಮಾರ್, ನಿತ್ಯಾನಂದ, ಗೀತಾ ಧರ್ಮಪ್ಪ, ಗೀತಾಂಜಲಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net