

ಆಯನೂರು: ವಿದ್ಯಾರ್ಥಿಗಳು ಕನಸುಗಳನ್ನು ಹೊತ್ತು ಕಾಲೇಜಿಗೆ ಬರುತ್ತಾರೆ. ಇಂತಹ ಆಲೋಚನೆಗಳು ಆರೋಗ್ಯಕರವಾಗಿರಬೇಕು ಮತ್ತು ಸಮಾಜಕ್ಕೆ ಪೂರಕವಾಗಿರಬೇಕು ಎಂದು ಶಾಸಕಿ ಶಾರದಾ ಪೂರ್ಯ ನಾಯ್ಕ ಹೇಳಿದರು.
ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ ಆ್ಯಂಡ್ ರೆಂಜರ್ಸ್, ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪದವಿಯ ನಂತರ ವಿದ್ಯಾರ್ಥಿಗಳ ಜೀವನಶೈಲಿ ಬದಲಾಗುತ್ತದೆ. ಸರ್ಕಾರಿ ಕೆಲಸವೇ ಬೇಕು ಎಂಬ ಆಸೆ ಬೇಡ. ಜೀವನ ರೂಪಿಸಿಕೊಳ್ಳಲು ಹಲವು ದಾರಿಗಳಿವೆ. ಆ ಶಕ್ತಿ ಹಾಗೂ ಪ್ರತಿಭೆ ನಿಮ್ಮೆಲ್ಲರಲ್ಲೂ ಇದೆ. ಪಾಲಕರು ಕಂಡಂತಹ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಸಾಗರದ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಸಣ್ಣ ಹನುಮಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದು ಒಳ್ಳೆಯದಲ್ಲ. ಒಳ್ಳೆಯ ಶಿಕ್ಷಣ ಪಡೆಯಲು ಮೊಬೈಲ್ ಬಳಸಿ. ಶಿಕ್ಷಣದ ವ್ಯವಸ್ಥೆ ದಿಕ್ಕು ತಪ್ಪಿದೆ. ವಿದ್ಯಾಭ್ಯಾಸದ ವೇಳೆ ದಾರಿ ತಪ್ಪಬಾರದು. ಎಚ್ಚರ ತಪ್ಪಿದರೆ ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಂಡಂತೆ ಎಂದು ಎಚ್ಚರಿಕೆ ನೀಡಿದರು.
ಕ್ರೀಡಾ ವಿಭಾಗದ ಸಂಚಾಲಕ ಡಾ. ರೋಹನ್ ಡಿಕಾಸ್ಟ ಮಾತನಾಡಿ, ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಕುಸ್ತಿ, ಜುಡೋ, ಪವರ್ ಲಿಫ್ಟಿಂಗ್, ವೇಟ್ ಲಿಫ್ಟಿಂಗ್‌ನಲ್ಲಿ 6 ಚಿನ್ನ, 10 ಬೆಳ್ಳಿ ಹಾಗೂ 6 ಕಂಚಿನ ಪದಕ ಗಳಿಸಿದೆ ಎಂದರು.
ಪ್ರಾಚಾರ್ಯ ಡಾ. ಎ.ಗಣೇಶ್ ಭಟ್, ಕಾಲೇಜು ಬಳಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಡಿಗ್ರಿಯಲ್ಲಿ ರ‌್ಯಾಂಕ್ ಪಡೆದ ಸಿ.ಎಂ.ಅಮೃತಾ ಸೇರಿದಂತೆ ಅತಿ ಹೆಚ್ಚು ಅಂಕ ಪಡೆದವರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜನಪದ ಕಲಾವಿದ ಡಾ. ಜಿ.ನಾಗರಾಜ್ ತೊಂಬ್ರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಬಿ.ಪಿ.ಮಹಾದೇವ್, ಕಚೇರಿ ಆಡಳಿತಾಧಿಕಾರಿ ವಿಜಯಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪೊ. ಜಿ.ಎನ್.ಕೀರ್ತಿನಾಥ್, ಜಿ.ಎಸ್.ತ್ರಿಶೂಲ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ನಿಜಾಮುದ್ದೀನ್, ಮುಖಂಡ ಬಸವರಾಜಪ್ಪ ಇತರರಿದ್ದರು.