ಪಶು ವೈದ್ಯಕೀಯ ಕಾಲೇಜು ಅವಶ್ಯ:ಎಚ್.ಎಸ್.ಪಾಟೀಲ್

WANT VETERINARY HOSPITAL LITERATURE PATIL SAYS DEVELOPMENT
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಗತಿಪಥ ಅವಲೋಕನ ವಿಚಾರ ಸಂಕಿರಣವನ್ನು ಸಾಹಿತಿ ಎಚ್.ಎಸ್.ಪಾಟೀಲ್ ಉದ್ಘಾಟಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಕುಲಪತಿ ಪ್ರೊ.ಬಿ.ಕೆ.ರವಿ, ಜಿಪಂ ಯೋಜನಾಧಿಕಾರಿ ಬಸವರಾಜ, ಕೆಪಿಎಸ್ಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ್, ಸಾಹಿತಿ ಸಾವಿತ್ರಿ ಮುಜುಮದಾರ, ಕುಲಸಚಿವ ಕೆ.ವಿ.ಪ್ರಸಾದ ಇದ್ದರು.
Published on

ಕೊಪ್ಪಳ: ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದೆ. ವಿವಿ, ವೈದ್ಯಕೀಯ, ತೋಟಗಾರಿಕೆ ಕಾಲೇಜುಗಳಿವೆ. ಸದ್ಯ ಪಶು ವೈದ್ಯಕೀಯ ಕಾಲೇಜು ಆರಂಭಿಸುವ ಅವಶ್ಯ ಇದೆ ಎಂದು ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಎಚ್.ಎಸ್.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದಿಂದ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಗತಿಪಥ ಅವಲೋಕನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕೊಪ್ಪಳ ಹಿಂದಿನಿಂದಲೂ ಶೈಕ್ಷಣಿಕವಾಗಿ ಪ್ರಮುಖ ಸ್ಥಾನ ಪಡೆದಿದೆ. ಅಶೋಕ ಚಕ್ರವರ್ತಿ ಇಲ್ಲಿ ಸನ್ನತ ವಿವಿ ಸ್ಥಾಪಿಸಿದ್ದ. ಪ್ರಾಕೃತ ಪಂಡಿತರು, 100ಕ್ಕೂ ಅಧಿಕ ವಿದ್ವಾಂಸರಿದ್ದರು.

ನಾವು ವಿದ್ಯಾಭ್ಯಾಸ ಮಾಡುವಾಗ ಉನ್ನತ ಶಿಕ್ಷಣಕ್ಕೆ ಕಲಬುರ್ಗಿ, ಧಾರವಾಡ, ಹೈದ್ರಾಬಾದ್ ಮುಂತಾದೆಡೆ ತೆರಳಬೇಕಿತ್ತು. ಈಗ ಜಿಲ್ಲೆಯಲ್ಲೇ ವಿವಿ, ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ತೋಟಗಾರಿಕೆ ಕಾಲೇಜುಗಳಾಗಿವೆ. ಪಶು ವೈದ್ಯಕೀಯ ಕಾಲೇಜು ಆರಂಭವಾದಲ್ಲಿ ಅನುಕೂಲವಾಗಲಿದೆ.

ಜಿಲ್ಲಾ ರಚನೆಗಾಗಿ ಅನೇಕ ಹೋರಾಟಗಳು ನಡೆದವು. 80 ದಿನಗಳ ಶಾಂತಿಯುತ ಹೋರಾಟ ರಾಜ್ಯಕ್ಕೆ ಮಾದರಿಯಾಯಿತು.

ಹೈದ್ರಾಬದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾತಿ ನೀಡುವಂತೆ ವೈಜನಾಥ ಪಾಟೀಲರ ನೇತೃತ್ವದಲ್ಲಿ ಹೋರಾಟ ಆರಂಭವಾದಾಗಲೂ ಜಿಲ್ಲೆಯಲ್ಲಿ ಹೋರಾಟ ಮತ್ತೊಂದು ಮೈಲುಗಲ್ಲಾಯಿತು.

ಬಳಿಕ 371(ಜೆ) ಮೀಸಲಾತಿ ಸಿಗುವ ಮೂಲಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಹೆಚ್ಚುವಂತಾಗಿದೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕೊಪ್ಪಳಕ್ಕೆ ವಿವಿ ಮಂಜೂರಾಗಿದ್ದು ಖುಷಿಯ ವಿಷಯ. ಆದರೆ, ತಳಕಲ್‌ಗೆ ವರ್ಗಾಯಿಸಿದ್ದು ಸರಿಯಲ್ಲ. ಜಿಲ್ಲಾ ಕೇಂದ್ರದಲ್ಲೇ ವಿವಿ ಇರಬೇಕು.

ಈ ಸಂಬಂಧ ಹೋರಾಟ ಮಾಡಬೇಕಿದೆ. ಯಾವುದೇ ಸರ್ಕಾರ ಇರಲಿ. ನಮಗೆ ಅನ್ಯಾಯವಾದಾಗ ಧ್ವನಿ ಎತ್ತಬೇಕು. ಹಿಂದೆ ಸಾಹಿತಿಗಳು ಯುವಕರಲ್ಲಿ ಹೋರಾಟ ಭಾವನೆ ತುಂಬುತ್ತಿದ್ದರು.

ಈಗ ಅದು ಕಾಣುತ್ತಿಲ್ಲ. ನಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳೋಣ ಎಂದರು.

ಜನರ ದನಿಯಾಗಬೇಕು: ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ವಿವಿ ಕೇವಲ ವಿದ್ಯೆ ನೀಡುವುದಲ್ಲ. ಜನರ ದನಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಚಟುವಟಿಕೆ ಆರಂಭಿಸಲಾಗುವುದು.

ಬಸವಣ್ಣ ನಡೆದಾಡಿದ ನಾಡಾದ ಕೊಪ್ಪಳದಲ್ಲಿ ವಿವಿ ಆರಂಭಿಸಿದ್ದು, ಐತಿಹಾಸಿಕ ಬೆಳವಣಿಗೆ. ಅಂತಾರಾಷ್ಟ್ರೀಯ ವಿವಿಯನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಜಿಪಂ ಯೋಜನಾಧಿಕಾರಿ ಬಸವರಾಜ, ಕೆಪಿಎಸ್ಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ್, ಸಾಹಿತಿ ಸಾವಿತ್ರಿ ಮುಜುಮದಾರ, ಕುಲಸಚಿವ ಕೆ.ವಿ.ಪ್ರಸಾದ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಮನೋಜ್ ಡೊಳ್ಳಿ, ಉಪನ್ಯಾಸಕ ಪ್ರವೀಣ ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net