

ಮಳವಳ್ಳಿ: ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಸುಳ್ಳು ಆರೋಪಗಳನ್ನು ಮಾಡಿಕೊಂಡು ಪಾದಯಾತ್ರೆ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಸುವುದಕ್ಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಪಕ್ಷ ಮತ್ತು ಸರ್ಕಾರದ ಉಳಿವಿಗಾಗಿ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಬೇಕಾದ ಸಂದರ್ಭ ಬಂದೊದಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಸಿದ್ಧರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ವಿರೋಧಿಗಳು ನಡೆಸುವ ಪಾದಯಾತ್ರೆಗಳ ಮಾರ್ಗಗಳ ಎಲ್ಲಾ ಕಡೆಗಳಲ್ಲಿ ಜನಾಂದೋಲನ ಕಾರ್ಯಕ್ರಮವನ್ನು ಆಯೋಜಿಸಿ ಜೆಡಿಎಸ್-ಬಿಜೆಪಿ ನಾಯಕರ ಅಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಸಭೆಗಳ ನೇತೃತ್ವವನ್ನು ಪಕ್ಷದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಹಿಸಿದ್ದು, ಮಂಡ್ಯ ನಗರದಲ್ಲಿ ಆ. 6 ಹಾಗೂ ಮೈಸೂರಿನಲ್ಲಿ ಆ.9 ರಂದು ಆಯೋಜಿಸಿರುವ ಬೃಹತ್ ಜನಾಂದೋಲನ ಸಭೆಗಳಿಗೆ ತಾಲೂಕಿನಿಂದ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಮುಖಂಡರಾದ ಆರ್.ಎನ್.ವಿಶ್ವಾಸ್, ದೇವರಾಜ್, ಚಿಕ್ಕಲಿಂಗಯ್ಯ, ಸಿದ್ದೇಗೌಡ, ಕುಳಚನ್ನಂಕಯ್ಯ ಮತ್ತಿತರರಿದ್ದರು.