ಮುದೇನಗುಡಿಯಲ್ಲಿ ಜೀವಜಲಕ್ಕೆ ಅಲೆದಾಟ

Mudenagudi
Published on

ರೋಣ: ಸಮರ್ಪಕ ನೀರು ಪೂರೈಸಲು ಸರ್ಕಾರಗಳು ಹಲವು ಯೋಜನೆ ಜಾರಿಗೊಳಿಸಿದ್ದರೂ ತಾಲೂಕಿನ ಮುದೇನಗುಡಿಯಲ್ಲಿ ಕುಡಿಯುವ ನೀರಿಗಾಗಿ ಜನರು ಕೊಡಗಳನ್ನು ಹಿಡಿದು ಅಲೆದಾಡುವ ಸ್ಥಿತಿಯಿದೆ. ಗ್ರಾಮದಲ್ಲಿ ಚರಂಡಿ ನೀರು ಮನೆಗಳ ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಮೌನವಹಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕುರಹಟ್ಟಿ ಗ್ರಾಪಂ ವ್ಯಾಪ್ತಿಯ ಮುದೇನಗುಡಿ ಗ್ರಾಮವು ಅಂದಾಜು 2500 ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರಿಗೆ ಊರ ಮುಂದಿನ ಕೊಳಾಯಿ ಏಕೈಕ ಕುಡಿಯುವ ನೀರಿನ ಮೂಲವಾಗಿದ್ದು, ಸರತಿ ಸಾಲಿನಲ್ಲಿ ನಿಂತು ನೀರು ತರಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ಗ್ರಾಮದಲ್ಲಿ ಈ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಲು ಸಂಬಂಧಪಟ್ಟ ಇಲಾಖೆಗಳು ಮಾಡಿದ ಎಲ್ಲ ಪ್ರಯತ್ನಗಳು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ವಿಫಲಗೊಂಡು ಜನರು ಹನಿ ನೀರಿಗಾಗಿ ಪರಿತಪಿಸುವಂತಾಗಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಿಷನ್ ಯೋಜನೆಯಡಿ ಈಗಾಗಲೇ ಗ್ರಾಮದ ಎಲ್ಲ ಮನೆಗಳಿಗೂ ಕೊಳಾಯಿ ಸಂಪರ್ಕ ಕಲ್ಪಿಸಿದ್ದರೂ ಇದುವರೆಗೂ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಫಲವಾಗಿದೆ.

ಗ್ರಾಮದ ನೈರ್ಮಲ್ಯದ ವಿಷಯದಲ್ಲಿ ಗ್ರಾಪಂ ಆಡಳಿತ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ದಲಿತರ ಕಾಲನಿಯಲ್ಲಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಮಸ್ತ ರಸ್ತೆಗಳು ರೋಗಗಳನ್ನು ಹರಡುವ ತಾಣಗಳಾಗಿ ಮಾರ್ಪಟ್ಟಿವೆ. ಗ್ರಾಮದ ನೈರ್ಮಲ್ಯ ಕೆಲಸ ನಿರ್ವಹಣೆಗೆ ಏಕೈಕ ಸಿಬ್ಬಂದಿ ನೇಮಕ ಮಾಡಿರುವ ಗ್ರಾಪಂ ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಲಿತ ಕಾಲನಿ ಮೂಲಕ ಹಾದು ಹೋಗುವ ಹುಲ್ಲೂರ ರಸ್ತೆ ಗ್ರಾಮದ ಪ್ರಮುಖ ರಸ್ತೆಯಾಗಿದ್ದು, ಇಕ್ಕೆಲಗಳಲ್ಲಿ ಅತಿಕ್ರಮಣವಾಗಿದೆ. ಸಿ.ಸಿ. ರಸ್ತೆಯನ್ನಾಗಲೀ, ಸೂಕ್ತ ಚರಂಡಿ ವ್ಯವಸ್ಥೆಯನ್ನಾಗಲೀ ನಿರ್ಮಾಣ ಮಾಡಲು ಸಾಧ್ಯವಾಗದೇ ಕಾಲನಿ ನಿವಾಸಿಗಳು ಆ ಮಾರ್ಗದಲ್ಲಿ ಸಂಚರಿಸುವುದೇ ದುಸ್ತರವಾಗಿದೆ.

ಗ್ರಾಮದಲ್ಲಿಲ್ಲ ಸಾರ್ವಜನಿಕ ಶೌಚಗೃಹ

ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳಚೆ ಪ್ರದೇಶಗಳು ನಿರ್ಮಾಣವಾಗಿವೆ. ಕಾರಣ ಸಮರ್ಪಕವಾದ ಸಾರ್ವಜನಿಕ ಶೌಚಗೃಹದ ವ್ಯವಸ್ಥೆ ಇಲ್ಲದಿರುವ ಕಾರಣದಿಂದಾಗಿ ಜನರು ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವಂತಾಗಿದೆ.

ಮುದೇನಗುಡಿ ಗ್ರಾಮದಲ್ಲಿ ಹತ್ತುಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಸೂಕ್ತ ಚರಂಡಿ ವ್ಯವಸ್ಥೆ ಸೇರಿ ಇತರ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಈ ಹಿಂದೆಯೇ ಜಿಪಂ ಸಿಇಒ ಅವರಿಗೆ ಮನವಿ ಮಾಡಿ ವರ್ಷಗಳೇ ಕಳೆದಿವೆ. ಆದರೂ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕರೆ ಸ್ವೀಕರಿಸದ ಪಿಡಿಒ

ಈ ಕುರಿತು ಮಾಹಿತಿ ಕೇಳಲು ಗ್ರಾಮ ಅಭಿವೃದ್ಧಿ ಅಧಿಕಾರಿ ಐ.ಎಫ್.ಬೋದ್ಲೇಖಾನ್ ಅವರಿಗೆ ದೂರವಾಣಿ ಕರೆ ಮಾಡಿದ್ದು ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಜಲಜೀವನ ಮಿಷನ್ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಾಗಲೇ ಗುತ್ತಿದಾರರಿಗೆ ನೋಟಿಸ್ ನೀಡಲಾಗಿದೆ. ಮುದೇನಗುಡಿ ಗ್ರಾಮಕ್ಕೆ ಡಿ.ಬಿಒಟಿ ಹಾಗೂ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಚಂದ್ರಕಾಂತ ನೆರಲೇಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮುಂದಿನ ವರ್ಷ ಆಕ್ಷನ್ ಪ್ಲಾನ್‌ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಹಾಗೂ ರಸ್ತೆ ನಿರ್ಮಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಚಂದ್ರಶೇಖರ ಕಂದಕೂರ, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net