

ಹುಬ್ಬಳ್ಳಿ : ಸರ್ಕಾರಿ ಪ್ರಾಥಮಿಕ ಶಾಲೆಯ ನಿರ್ಮಾಣ ಹಂತದ ಕೊಠಡಿಯ ಪಕ್ಕ ಆಟವಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರ ಮೇಲೆ ಗೋಡೆ ಕುಸಿದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ಗಾಯಗೊಂಡ ಘಟನೆ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮೂರನೇ ತರಗತಿಯಲ್ಲಿ ಓದುತ್ತಿದ್ದ ವಿಶೃತ್ ಫಕ್ಕೀರಪ್ಪ ಬೆಳಗಲಿ (9) ಎಂಬ ವಿದ್ಯಾರ್ಥಿಯೇ ಸಾವಿಗೀಡಾಗಿದ್ದು, ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿ ಪ್ರಜ್ವಲ ಮಂಜುನಾಥ ನಾಗಾವಿಯನ್ನು ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿದೆ.
ಶಾಲೆ ಪ್ರಾರಂಭಗೊಳ್ಳುವ ಮುಂಚೆಯೇ ಶಾಲೆಗೆ ತೆರಳಿದ್ದ ಇಬ್ಬರೂ ಬಾಲಕರು, ನಿರ್ಮಾಣ ಹಂತದ ಕೊಠಡಿಯ ಪಕ್ಕ ಆಟವಾಡುತ್ತಿದ್ದರು ಎನ್ನಲಾಗಿದೆ. ಗೋಡೆಗೆ ಕಟ್ಟಿದ್ದ ಕಟ್ಟಿಗೆ ಜಾರಿದ್ದರಿಂದ ಇಟ್ಟಿಗೆಗಳು ಬಾಲಕರ ಮೇಲೆ ಬಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಫಕ್ಕೀರಪ್ಪ ಬೆಳಗಲಿ ದಂಪತಿಗೆ ವಿಶೃತ್ ಒಬ್ಬನೇ ಮಗನಾಗಿದ್ದ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಡಿಡಿಪಿಐ ಎಸ್.ಎಸ್. ಕೆಳದಿಮಠ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.