ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ

21 mlv 1.
ಮಳವಳ್ಳಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಕೋಟೆ ಬೀದಿಯಲ್ಲಿರುವ ಶಿವಕುಮಾರ್ ಎಂಬುದರಿಗೆ ಸೇರಿದ ಮನೆ ಕುಸಿದಿರುವುದು.
Published on

ಮಳವಳ್ಳಿ: ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟಣ ಸೇರಿದಂತೆ ಪೂರಿಗಾಲಿ ಗ್ರಾಮದಲ್ಲಿ ಮನೆಗಳ ಗೋಡೆ ಕುಸಿದು ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ.


ಪಟ್ಟಣದ ಕೋಟೆ ಬೀದಿಯ ನಿವಾಸಿ ಶಿವಕುಮಾರ್ ಹಾಗೂ ಪೂರಿಗಾಲಿ ಗ್ರಾಮದ ಸುಕನ್ಯಾ ಅವರ ಮನೆಗಳ ಗೋಡೆಗಳು ಕುಸಿದಿವೆ. ಪಟ್ಟಣದಲ್ಲಿ ತಡರಾತ್ರಿ
ಜೋರು ಮಳೆ ಸುರಿಯುತ್ತಿದ್ದಾಗ ಮನೆಯ ಗೋಡೆ ಬಿರುಕು ಬಿಟ್ಟಿದೆ. ಇದನ್ನು ಅರಿತು ಮನೆಯೊಳಗೆ ಮಲಗಿದ್ದ ಶಿವಕುಮಾರ್ ಮತ್ತು ಅವರ ತಾಯಿ ತಕ್ಷಣ ಮನೆಯಿಂದ ಹೊರಬಂದಿದ್ದಾರೆ. ಅಷ್ಟರಲ್ಲಿ ಗೋಡೆ ಒಂದೆಡೆಗೆ ಕುಸಿದು ಛಾವಣಿ ಕೆಳಗೆ ಬಿದ್ದಿದೆ. ಇದರಿಂದ ದಿನಸಿ ಮತ್ತು ಇತರ ಸಾಮಗ್ರಿ ಹಾನಿಯಾಗಿದೆ. ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೂರಿಗಾಲಿ ಗ್ರಾಮದ ಸುಕನ್ಯಾ ಕುಟುಂಬದವರು ಬೆಂಗಳೂರಿನಲ್ಲಿ ವಾಸವಿದ್ದು, ಹಬ್ಬಹರಿದಿನಗಳಲ್ಲಿ ಗ್ರಾಮಕ್ಕೆ ಬಂದಾಗ ಮನೆಯಲ್ಲಿ ಇರುತ್ತಿದ್ದರು. ಸದ್ಯ ಮಳೆಗೆ ಮನೆ ಸಂಪೂರ್ಣ ಕುಸಿದಿದ್ದು, ದಿನಸಿ ಮತ್ತು ಅಡುಗೆ ಸಾಮಗ್ರಿ ಮಣ್ಣುಪಾಲಾಗಿದೆ. ಎರಡೂ ಹಾನಿ ಸ್ಥಳಗಳಿಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.


ಅಲ್ಲದೆ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ಪಟ್ಟಣದ ತಗ್ಗು ಪ್ರದೇಶದ ಮನೆಗಳು, ದೇವಸ್ಥಾನಗಳಿಗೆ ಮಳೆನೀರು ನುಗ್ಗಿದ್ದು, ಜನ ಪರದಾಡುವಂತಾಯಿತು.


ಪಟ್ಟಣದ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಬದಿಯಲ್ಲಿರುವ ನಿಡಘಟ್ಟ ರಸ್ತೆಯ ಶನೈಶ್ಚರ ದೇವಸ್ಥಾನಕ್ಕೆ ನೀರು ನುಗ್ಗಿ ಜಲದಿಗ್ಭಂಧನ ಉಂಟಾಗಿತು. ಇಡೀ ದೇವಾಲಯ ಜಲಾವೃತ ವಾಗಿದ್ದರಿಂದ ನೀರನ್ನು ಹೊರ ಹಾಕಲು ಅರ್ಚಕರು ಹಾಗೂ ಭಕ್ತರು ಪರದಾಡಿದರು.

ಮಳೆ ಬಂದಾಗಲೆಲ್ಲ ಈ ದೇವಾಲಯಕ್ಕೆ ನೀರು ನುಗ್ಗುತ್ತಿದ್ದು, ಈ ನೀರನ್ನು ತಡೆಗಟ್ಟುವ ಕುರಿತು ಪುರಸಭೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net