ಸಾಧಾರಣ ಮಳೆಗೆ ಉದುರುತ್ತಿದೆ ಮಣ್ಣು

04mdk03
Published on

ಮಡಿಕೇರಿ:

ಮಡಿಕೇರಿ ಜಿಲ್ಲಾಡಳಿತ ಭವನ ತಡೆಗೋಡೆ ಮತ್ತೆ ಸದ್ದು ಮಾಡುತ್ತಿದೆ. ಕೇವಲ ೨ ದಿನಗಳ ಸಾಧಾರಣ ಮಳೆಗೆ ಗೋಡೆಗೆ ಮುಚ್ಚಿದ್ದ ಪ್ಲಾಸ್ಟಿಕ್ ಹೊದಿಕೆಯೊಳಗಿನಿಂದ ಕೆಸರು ಮಿಶ್ರಿತ ಮಣ್ಣು ಹೊರ ಬರುತ್ತಿದೆ. ಇದು ತಡೆಗೋಡೆ ಕುಸಿಯುವ ಆತಂಕ ಕಾಣಿಸಿಕೊಳ್ಳುವಂತೆ ಮಾಡಿದ್ದು, ೭ ಕೋಟಿ ರೂ. ಮಣ್ಣು ಪಾಲಾಗುವ ಬಗ್ಗೆ ಜನವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.

೨೦೧೮ರಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಮಡಿಕೇರಿ ಜಿಲ್ಲಾಡಳಿತ ಭವನದ ತಡೆಗೋಡೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೨೭೫ರ ಭಾಗದಲ್ಲಿ ಕುಸಿತವಾಗಿತ್ತು. ಈ ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ತಡೆಗೋಡೆ ಕಾಮಗಾರಿ ನಡೆಸಲಾಗಿತ್ತು. ೨೦೧೮ರಲ್ಲಿ ಶುರುವಾದ ಕಾಮಗಾರಿ ೨೦೨೨ರಲ್ಲಿ ಪೂರ್ಣವಾಗಿತ್ತು.

ಜರ್ಮನ್ ತಂತ್ರಜ್ಞಾನ ಬಳಸಿ ಈ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ೧೪೮ ಮೀ. ಉದ್ದ, ೧೫ ಮೀ, ಎತ್ತರದ ಈ ತಡೆಗೋಡೆ ನಿರ್ಮಾಣಕ್ಕೆ ೭ ಕೋಟಿ ರೂ. ವೆಚ್ಚವಾಗಿದೆ. ಆಶ್ಚರ್ಯ ಎಂದರೆ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಖರ್ಚಾಗಿದ್ದು ೫ ಕೋಟಿ ರೂ. ಇಂತಹ ತಡೆಗೋಡೆಯ ಬಂಡವಾಳ ಕೆಲವೇ ತಿಂಗಳಲ್ಲಿ ಬಯಲಾಗಿತ್ತು.

೨೦೨೨ರಲ್ಲಿ ಮಳೆ ಜೋರಾಗುತ್ತಿದ್ದಂತೆಯೇ ನೀರಿನ ಒತ್ತಡ ತಾಳಲಾರದೆ ಜೂನ್‌ನಲ್ಲಿ ಕುಸಿಯಲಾರಂಭಿಸಿತ್ತು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಮಂಗಳೂರು ಹೆದ್ದಾರಿ ಬಂದ್ ಮಾಡಿ ಬದಲಿ ರಸ್ತೆಯಲ್ಲಿ ವಾಹನಗಳನ್ನು ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ನಂತರ ತಡೆಗೋಡೆಯಲ್ಲಿ ಹಾನಿಗೆ ಒಳಗಾಗಿದ್ದ ಸ್ಲ್ಯಾಬ್‌ಗಳನ್ನು ಬದಲಿಸುವ ಕಾಮಗಾರಿ ನಡೆಸಿದ್ದಲ್ಲದೆ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿತ್ತು.

ಇದೀಗ ಜುಲೈ ಮೊದಲ ವಾರದಲ್ಲಿ ನಿಧಾನಕ್ಕೆ ಮಳೆ ಚೇತರಿಸಿಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಕಚೇರಿ ತಡೆಗೋಡೆ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿ-ಮಂಗಳೂರು ರಸ್ತೆಯ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಈ ವರ್ಷವೂ ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್ ಆಗುವ ಸಾಧ್ಯತೆ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಪ್ಲಾಸ್ಟಿಕ್ ಮುಸುಕಿನ ಕೆಳಗೆ ಮೌನವಾಗಿದ್ದ ತಡೆಗೋಡೆಯ ಕಳಪೆ ಕಾಮಗಾರಿಯ ಬಣ್ಣ ಹೊರಬರುತ್ತಿದೆ.

ತಡೆಗೋಡೆಯುದ್ದಕ್ಕೂ ಹೊದಿಸಿ ಕಪ್ಪು ಬಂಡೆಯಂತೆ ದೂರಕ್ಕೆ ಕಾಣುತ್ತಿದ್ದ ಪ್ಲಾಸ್ಟಿಕ್ ಹೊದಿಕೆ ಅಲ್ಲಲ್ಲಿ ಹರಿದುಹೋಗಿದ್ದು ಮಣ್ಣು ಮಿಶ್ರಿತ ಕೆಸರು ನೀರು ಹರಿದು ಬರುತ್ತಿದೆ. ಹೀಗೆ ಮಣ್ಣು ಸಹಿತ ನೀರು ಬರುತ್ತಿರುವುದರಿಂದ ಮಣ್ಣೂ ಸಡಿಲವಾಗಿ ಸಂಪೂರ್ಣ ತಡೆಗೋಡೆ ಕುಸಿಯುವ ಭೀತಿ ಕಾಣಿಸಿಕೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲಲ್ಲಿ ದುರಸ್ತಿಪಡಿಸುವ ಕೆಲಸವೂ ನಡೆದಿದೆ. ಆದರೆ ಮಳೆಯ ಪ್ರಮಾಣ ಜೋರಾದರೆ ತಡೆಗೋಡೆ ಕುಸಿಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಶಾಸಕರಾದ ಡಾ. ಮಂತರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ತಡೆಗೋಡೆಯ ಕಳಪೆ ಕಾಮಗಾರಿ ವಿಷಯವನ್ನು ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರಕ್ಕೆ ಹಾರಿಕೆಯ ಉತ್ತರ ಕೊಡಲು, ಜನತೆಯ ಕಣ್ಣಿಗೆ ಮಣ್ಣೆರಚಲು ಈಗ ಟಾರ್ಫಲ್ ಹೊದಿಸುತ್ತಿದ್ದಾರೆ. ಖಂಡಿದ ಇದು ನಿಲ್ಲುವುದಿಲ್ಲ.

  • ತೆನ್ನೀರ ಮೈನಾ, ಕಾಂಗ್ರೆಸ್ ವಕ್ತಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net