ಪಾದಯಾತ್ರೆಯಿಂದ ಸಿಗುತ್ತದೆ ತೃಪ್ತಿ, ಶಕ್ತಿ

Bel_Padayathre
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸಮಾನ ಮನಸ್ಕರು, ಸಜ್ಜನರು ಸೇರಿ ಆರಂಭಿಸಿದ ಪಾದಯಾತ್ರೆ ಪರಂಪರೆ ಇಂದು ಸಂಸ್ಕೃತಿಯಾಗಿ ಬೆಳೆದಿದೆ.ಊರಿನ ಸೌಹಾರ್ದ, ಸತ್ಯ, ಧರ್ಮ, ಪ್ರೀತಿ ಎತ್ತಿ ಹಿಡಿಯಲು ಪಾದಯಾತ್ರೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಭಾನುವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿವರ್ಷ 10 ಸಾವಿರಕ್ಕಿಂತ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು ಉಜಿರೆ ಹಾಗೂ ಆಸುಪಾಸಿನ ಗ್ರಾಮಸ್ಥರಿಗೆ, ಊರವರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಪಾದಯಾತ್ರೆಯ ಹಿಂದೆ ದೊಡ್ಡ ಶಕ್ತಿ ಇದೆ. ಪಾದಯಾತ್ರೆಯಿಂದ ತೃಪ್ತಿ, ಶಕ್ತಿ , ಸ್ಫೂರ್ತಿ ಸಿಗುತ್ತದೆ ಎಂದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮತ್ತು ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೀರ್ತಿ ಶೇಷರಾದ ವಿಜಯ ರಾಘವ ಪಡುವೆಟ್ನಾಯ ಹಾಗೂ ಯಶೋವರ್ಮ ಹಾಕಿಕೊಟ್ಟ ಪಾದಯಾತ್ರೆ ಇಂದು ನಾಡಿನಲ್ಲಿ ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯನ್ನು ಹುಟ್ಟು ಹಾಕಿದೆ ಎಂದರು.

ಪಾದಯಾತ್ರೆಯ ಮಾರ್ಗದರ್ಶಕ ಪೂರಣ್ ವರ್ಮ ಮಾತನಾಡಿ ಭಕ್ತಿ, ಶ್ರದ್ಧೆ, ಗೌರವ, ಪ್ರೀತಿಯ ಹೆಜ್ಜೆಯೊಂದಿಗೆ ಆರಂಭವಾದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಈ ಬಾರಿಯ ಪಾದಯಾತ್ರೆಗೆ ಬಿಳಿಯ ವಸ್ತ್ರ ಧರಿಸಿ ಬಂದರೆ ಉತ್ತಮ. ಪಾದಯಾತ್ರೆ ದೇವರ ನಾಮಸ್ಮರಣೆಯೊಂದಿಗೆ ನಿಧಾನವಾಗಿ ಸಾಗಬೇಕು. ಈ ಸಂದರ್ಭ ಅಲ್ಲಲ್ಲಿ ನೀರು ಮತ್ತು ಬೆಲ್ಲದ ವ್ಯವಸ್ಥೆ ಇರಲಿದೆ ಎಂದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಮಾತನಾಡಿದರು.ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ತಾಲೂಕು ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಬೆಳ್ತಂಗಡಿ, ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಯೋಜನೆಯ ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಕಳೆದ ವರ್ಷದ ಪಾದಯಾತ್ರೆ ಆಯ-ವ್ಯಯ ಮಂಡಿಸಲಾಯಿತು. ಈ ಬಾರಿಯ ಪಾದಯಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

26ರಂದು ಪಾದಯಾತ್ರೆ

ಈ ಬಾರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ ನ.26ರಂದು ಮಧ್ಯಾಹ್ನ 3ಕ್ಕೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ನಡೆಯಲಿದೆ ಇದು. 12ನೇ ವರ್ಷದ ಪಾದಯಾತ್ರೆಯಾಗಿದ್ದು, ಗಣ್ಯರ ಸಹಿತ ಅನೇಕ ಭಜನಾ ತಂಡಗಳು, ಭಕ್ತರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net