

ಎನ್.ಆರ್.ಪುರ: ಜಂಟಿ ಸರ್ವೇ ಕಾರ್ಯ ಆಗುವುವರೆಗೆ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯಭೂಮಿ ಹಾಗೂ ಕಂದಾಯ ಭೂಮಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಹಾಗೂ ಮಲೆನಾಡಿನ ರೈತರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ 17ರಂದು ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಶೃಂಗೇರಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎನ್ ನಾಗೇಶ್ ತಿಳಿಸಿದರು.
ಅಂದು ಬೆಳಗ್ಗೆ ಆಯಾ ತಾಲೂಕು ಕೇಂದ್ರಗಳಿಂದ ರೈತರು ವಾಹನದ ಮೆರವಣಿಗೆಯಲ್ಲಿ ಬಂದು ಕೊಪ್ಪ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ಸೇರಲಾಗುವುದು. 11 ಗಂಟೆಯಿಂದ ಕೊಪ್ಪ ಟೌನ್‌ಹಾಲ್ ನಿಂದ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ನಡೆಯಲಿದೆ. ನಂತರ ಪ್ರತಿಭಟನಾ ಸಭೆ ನಡೆಯಲಿದ್ದು, ಸಭೆಯಲ್ಲಿ ಲೋಕಸಭಾ ಸದಸ್ಯರು, ಶಾಸಕರು, ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗೆ, ರೈತ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆ, ಮೆಡಿಕಲ್‌ಶಾಪ್, ಪೆಟ್ರೋಲ್‌ಬಂಕ್, ಹಾಲಿನ ಅಂಗಡಿ ಬಿಟ್ಟು ಎಲ್ಲ ಅಂಗಡಿ, ಹೋಟೆಲ್, ಬಸ್, ಶಾಲಾ ಕಾಲೇಜು ಬಂದ್ ಮಾಡಿ ರೈತರಿಗೆ ಬೆಂಬಲ ನೀಡಬೇಕು. ಬಂದ್ ಸಮಯದಲ್ಲಿ ಎಲ್ಲರೂ ಶಾಂತಯುತ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ದೇವಂತರಾಜ್, ಕಾರ್ಯದರ್ಶಿ ಪುರುಷೋತ್ತಮ್, ಸದಸ್ಯರಾದ ಎನ್.ಶೇಖರ್, ಎಲಿಯೇಸ್, ಅಭಿಲಾಸ್, ರೈತ ಮುಖಂಡ ಗೇರ್‌ಬೈಲು ನಟರಾಜ್ ಇದ್ದರು.