ಕಳ್ಳಮಾರ್ಗದಲ್ಲಿ ಕ್ರಷರ್ ಲಾರಿಗಳ ಓಡಾಟ, ಹೆದ್ದಾರಿ ಬಿಟ್ಟು ಆನೇಕಲ್ ರಸ್ತೆಗಿಳಿದ ವಾಹನಗಳು, ಸಮಂದೂರಿನಿಂದ ಚಂದಾಪುರದವರೆಗೆ ಸಂಚಾರ ಯಾತನೆ

25ank news and photos 01(2)
Published on

ಆನೇಕಲ್: ತಮಿಳುನಾಡಿನಿಂದ ಅಧಿಕ ಭಾರ ಹೊತ್ತು ರಾಜ್ಯಕ್ಕೆ ಬರುವ ಬಹುತೇಕ ಲಾರಿಗಳು ಗಡಿಭಾಗದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವುದು ಮಾಮೂಲಿಯಾಗಿದೆ. ಪದೇಪದೆ ಇಂತಹ ವಾಹನಗಳ ಓಡಾಟ ಬೆಳಕಿಗೆ ಬರುತ್ತಿದ್ದರೂ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮಕೈಗೊಂಡಿಲ್ಲ.

ಇತ್ತೀಚೆಗಂತೂ ಗಡಿ ಗ್ರಾಮಗಳಲ್ಲಿ ಲಾರಿಗಳ ಓಡಾಟದಿಂದ ಜನ ಹೈರಾಣಾಗಿದ್ದಾರೆ. ಹೆದ್ದಾರಿಗಳಲ್ಲಿ ಅಧಿಕಾರಿಗಳು ಪಹರೆ ಕಾಯುವುದನ್ನು ಮನಗಂಡ ನೂರಾರು ಲಾರಿಗಳು ಕಳ್ಳ ಮಾರ್ಗಗಳನ್ನು ಹುಡುಕಿಕೊಂಡಿವೆ. ಅತ್ತಿಬೆಲೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದರೆ ಅಧಿಕಾರಿಗಳು ದಂಡ ವಿಧಿಸುವುದರ ಜತೆಗೆ ಕೇಸು ದಾಖಲಿಸುತ್ತಾರೆ ಎನ್ನುವ ಕಾರಣದಿಂದ ಆನೇಕಲ್ ಮೂಲಕ ಸಂಚರಿಸುತ್ತಿವೆ. ದಿನದ 24 ಗಂಟೆಯೂ ಸಾವಿರಕ್ಕೂ ಹೆಚ್ಚು ಲಾರಿಗಳು ಕಳ್ಳ ದಾರಿಯ ಮೂಲಕ ಆನೇಕಲ್ ಕಡೆಗೆ ಬಂದು ನಂತರ ಬೆಂಗಳೂರು, ಬನ್ನೇರುಘಟ್ಟಕ್ಕೆ ಹೋಗುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ.

ಈ ಲಾರಿಗಳ ಓಡಾಟದಿಂದ ಗಡಿಭಾಗದ ಸಮಂದೂರು ಗ್ರಾಮದಿಂದ ಆನೇಕಲ್, ಬನ್ನೇರುಘಟ್ಟ, ಚಂದಾಪುರ ರಸ್ತೆಯ ಡಾಂಬರು ಕಿತ್ತು ಗುಂಡಿಗಳು ಬಿದ್ದಿವೆ. ಅಧಿಕ ಭಾರ ಹೊಂದಿರುವ ಲಾರಿಗಳು ಸಣ್ಣ ರಸ್ತೆಯಲ್ಲಿ ತೆರಳುವುದರಿಂದ ಬೇರೆ ವಾಹನಗಳು ಓಡಾಡಲು ಕಷ್ಟವಾಗಿದೆ. ಅಲ್ಲದೆ ಬೈಕ್ ಸವಾರರಿಗಂತೂ ಅಪಾಯಕಾರಿಯೂ ಹೌದು.

ದಿನವಿಡೀ ಹೊಸೂರು ರಸ್ತೆಯಲ್ಲಿ ಓಡಾಡುವುದರಿಂದ ಹೋಟೆಲ್, ಆಸ್ಪತ್ರೆಗಳಿಗೆ ಧೂಳು ತುಂಬಿಕೊಳ್ಳುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳದಿರುವುದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಅಪಾಯಕಾರಿ ಚಾಲನೆ: ಅಧಿಕ ಭಾರ ಹಾಕಿಕೊಂಡು ಬರುವ ಲಾರಿಗಳು ಎದುರಿಗೆ ಸಣ್ಣಪುಟ್ಟ ವಾಹನಗಳು ಬಂದರೂ ಬ್ರೇಕ್ ಹಾಕದೆ ವೇಗವಾಗಿ ಚಲಿಸುತ್ತಿವೆ. ಗುಡ್ಡನಹಳ್ಳಿ ಹಾಗೂ ಆನೇಕಲ್ ಪಟ್ಟಣದ ಡೇರಿ ಸರ್ಕಲ್ ಬಳಿಯಂತೂ ಭಾರಿ ಗಾತ್ರದ ಹೊಂಡಗಳು ಬಿದ್ದಿವೆ. ಗುಡ್ನಹಳ್ಳಿ ಕೆರೆ ಏರಿ ಬಳಿ ಹಾಕಿದ್ದ ಡಾಂಬರು ಒಂದೇ ತಿಂಗಳಲ್ಲಿ ಕಿತ್ತು ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. ಸಣ್ಣ ವಾಹನಗಳಿಗೆ ಈ ರಸ್ತೆ ಅಪಾಯಕಾರಿಯಾಗಿದೆ.

ಕೇಳುವವರ ಮೇಲೆ ಧಮ್ಕಿ: ವೇಗವಾಗಿ ಓಡಾಡುವ ಲಾರಿಗಳನ್ನು ಆನೇಕಲ್ ಪಟ್ಟಣದ ಸಂತ ಜೋಸೆಫರ ಶಾಲೆಯ ಬಳಿ ಸ್ಥಳೀಯರು ತಡೆದಾಗ ಚಾಲಕರು ಬೆದರಿಕೆ ಹಾಕಿದ್ದು ಇವರ ಆಟಾಟೋಪಕ್ಕೆ ಸ್ಥಳೀಯರು ಹೆದರಿದ್ದಾರೆ. ಓವರ್ ಲೋಡಿನಿಂದ ರಸ್ತೆಯಲ್ಲಿ ಬರುವವರ ಮೇಲೆ ಜಲ್ಲಿ ಕಲ್ಲುಗಳು ಬೀಳುತ್ತಿವೆ. ಟ್ಯಾಕ್ಸ್ ಕಟ್ಟದೆ ಕಳ್ಳದಾರಿ ಹಿಡಿದಿರುವ ಲಾರಿಗಳಿಂದ ರಾಜ್ಯ ಸರ್ಕಾರಕ್ಕೂ ಭಾರಿ ನಷ್ಟ ಉಂಟಾಗುತ್ತಿದೆ.

ಪ್ರತಿದಿನ ಸಾವಿರಾರು ಲಾರಿಗಳು ಓಡಾಡುತ್ತಿವೆ, ಮನೆಗಳಲ್ಲಿ ಇರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಓಡಾಟದಿಂದ ನಿದ್ದೆ ಬರುತ್ತಿಲ್ಲ. ಅಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಜಯರಾಮ್, ಸ್ಥಳೀಯ ಮೊದಲೇ ಆನೇಕಲ್ ರಸ್ತೆಗಳು ಕಿರಿದಾಗಿದ್ದು, ವೇಗವಾಗಿ ಬರುವ ಲಾರಿಗಳಿಂದ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಸಂಪೂರ್ಣ ಕಿತ್ತಿದ್ದು ದ್ವಿಚಕ್ರವಾಹನ ಸವಾರರು ಓಡಾಡಲು ಸಾಧ್ಯವಾಗುತ್ತಿಲ್ಲ. ಮೂರ್ತಿ, ಆನೇಕಲ್ ಪಟ್ಟಣ ನಿವಾಸಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಲಾರಿಗಳು ಓಡಾಡುತ್ತಿವೆ. ಸಣ್ಣ ವಾಹನಗಳು ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಲಾರಿಗಳು ಸಾಲುಗಟ್ಟಿ ಬರುತ್ತಿರುವುದರಿಂದ ರೋಸಿ ಹೋಗಿದ್ದೇವೆ. ಆರ್‌ಟಿಒ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಮಧು, ಆಟೋ ಡ್ರೈವರ್ ಪ್ರತಿದಿನ ತರಕಾರಿ ತೆಗೆದುಕೊಂಡು ಆನೇಕಲ್ ಪಟ್ಟಣಕ್ಕೆ ಹೋಗಬೇಕು, ಆದರೆ ಗುಡ್ಡನಹಳ್ಳಿ ಹಾಗೂ ಸಮಂದೂರು ಭಾಗದಲ್ಲಿ ರಸ್ತೆಗಳು ಸಂಪೂರ್ಣ ಕಿತ್ತಿರುವುದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಮುನಿವೀರಯ್ಯ, ಬೈಕ್ ಸವಾರರು ಈಗಾಗಲೇ ಮೇಲಧಿಕಾರಿಗಳಿಗೆ ಅಕ್ರಮ ಲಾರಿಗಳ ಓಡಾಟ ಹಾಗೂ ರಾಜ್ಯಕ್ಕೆ ಸುಂಕ ಕಟ್ಟುವ ವಿಚಾರದ ಬಗ್ಗೆ ಎಲ್ಲ ರೀತಿಯ ಮಾಹಿತಿಗಳನ್ನು ತಿಳಿಸಲಾಗಿದೆ. ಅಕ್ರಮವಾಗಿ ಓಡಾಡುವ ಲಾರಿಗಳ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು. ನಿಯಾಜ್, ಆರ್‌ಟಿಒ ಇನ್‌ಸ್ಪೆಕ್ಟರ್, ಆನೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net