ಕನ್ನಡದ ಕೆಲಸ ಮಾಡುತ್ತಿರುವ ಅಕ್ಕ ಒಕ್ಕೂಟ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ

Walkathon organized by Akka Union Mandya
Published on

ಮಂಡ್ಯ: ಸರ್ಕಾರ ಅಥವಾ ಸಾರ್ವಜನಿಕರು ಒಂದು ಕಾರ್ಯಕ್ರಮ ರೂಪಿಸಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಆದರೆ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಅಕ್ಕ ಒಕ್ಕೂಟ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಕ ಒಕ್ಕೂಟದ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಐದು ಕಿ.ಮೀ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಮೆರಿಕಾದಲ್ಲಿ ಕನ್ನಡದ ತೇರು ಎಳೆಯುತ್ತಿರುವ ಅಕ್ಕ ಒಕ್ಕೂಟಕ್ಕೆ ಎಲ್ಲ ಸರ್ಕಾರಗಳು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿವೆ. ಇದೇ ರೀತಿ ಅಮೆರಿಕಾದಲ್ಲಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆ ಬೆಳಗಿಸಲಿ ಎಂದು ಸಲಹೆ ನೀಡಿದರು.

ಅಕ್ಕ ಒಕ್ಕೂಟ ಕನ್ನಡ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಹಾಗೂ ಸ್ವಾಮೀಜಿಗಳ ಬೆಂಬಲವು ಸದಾಕಾಲ ಇರುತ್ತದೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿರುವ ಜನರನ್ನು ಮತ್ತು ಕನ್ನಡ ಅಭಿಮಾನಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಒಕ್ಕೂಟದ ಅಧ್ಯಕ್ಷ ಮಧು ರಂಗಯ್ಯ ಅವರು ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರು ತಮ್ಮ ಪೂರ್ವ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿಯೇ ಮುಗಿಸಿದ್ದಾರೆ. ಅದೇ ರೀತಿ ಕರ್ನಾಟಕಕ್ಕೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಮೆಚ್ಚುವ ಕೆಲಸ ಎಂದು ಶ್ಲಾಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಳೆದ ಇಪ್ಪತ್ತು ವರ್ಷದಿಂದ ನಾವೆಲ್ಲರೂ ಅಮೆರಿಕಾದಲ್ಲಿ ಅಕ್ಕ ಒಕ್ಕೂಟ ಆಯೋಜಿಸುವ ಕನ್ನಡದ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ. ಮಧು ರಂಗಯ್ಯ ಅವರ ಸಾರಥ್ಯದಲ್ಲಿ ಅಕ್ಕ ಸಮ್ಮೇಳನದ ಜತೆಗೆ ಸಾಮಾಜಿಕ ಸೇವೆ, ವನ್ಯಜೀವಿ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಾಕಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಇತರರಿದ್ದರು.

ಹುಟ್ಟಿದ ಊರನ್ನು ಮರೆಯಬಾರದು, ನಮ್ಮ ಊರು ನಮ್ಮ ದಾರಿ ಎಂಬ ಕಾರ್ಯಕ್ರಮವನ್ನು ಅಕ್ಕ ಒಕ್ಕೂಟದ ಅಧ್ಯಕ್ಷ ಮಧು ರಂಗಯ್ಯ ಅವರು ಮಂಡ್ಯದಲ್ಲಿ ಆಯೋಜಿಸಿದ್ದಾರೆ. ನಾವು ಎಷ್ಟೇ ಬೆಳೆದರು ನಮ್ಮ ಊರಿಗೆ ಕಿಂಚಿತ್ತಾದರೂ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿರುವುದು ಇತರರಿಗೂ ಪ್ರೇರಣೆ. ನೆನಪಿರಲಿ ಪ್ರೇಮ್ ಚಲನಚಿತ್ರ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net