

ಹುಬ್ಬಳ್ಳಿ: ಪಾರ್ಶ್ವವಾಯು ಕಾಯಿಲೆಗೆ ಚಿಕಿತ್ಸೆ ನೀಡುವುದರ ಜತೆಗೆ ಕಾಯಿಲೆ ಬರದಂತೆ ತಡೆಯುವ ಉದ್ದೇಶದಿಂದ ಜನಜಾಗೃತಿ ಮೂಡಿಸಲು ವಾಕಥಾನ್ ಹಮ್ಮಿಕೊಂಡಿರುವ ಡಾ. ಕ್ರಾಂತಿಕಿರಣ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವ ಪಾರ್ಶ್ವವಾಯು ದಿನ ಅಂಗವಾಗಿ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಕ್ಷಮತಾ ಸೇವಾ ಸಂಸ್ಥೆ ಇವರ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಶಾಖೆ, ಲಯನ್ಸ್ ಹಾಗೂ ರೋಟರಿ ಕ್ಲಬ್, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಹು-ಧಾ ಪೂರ್ವ ಬಿಜೆಪಿ ವಿಧಾನಸಭೆ ಕ್ಷೇತ್ರಗಳ ಸಹಯೋಗದಲ್ಲಿ ಭಾನುವಾರದಂದು ಆಸ್ಪತ್ರೆ ಆವರಣದಿಂದ ಆಯೋಜಿಸಿದ್ದ ಜನಜಾಗೃತಿ ವಾಕ್ಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಕಾಯಿಲೆ ಬಹು ಗಂಭೀರವಾಗಿ ಎಲ್ಲ ವರ್ಗದ ಜನರನ್ನು ಬಾಧಿಸುತ್ತಿದ್ದು, ಮೃತ್ಯು ಪ್ರಮಾಣದಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವುದು ಆತಂಕಕಾರಿ. ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಉತ್ತಮ ಆಹಾರ ಸೇವನೆ ಮೂಲಕ ಕಾಯಿಲೆ ಬರದಂತೆ ದೇಹಾರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸ್ಟ್ರೋಕ್ ಬರಲಿದೆ ಎಂಬ ಕಾಲವಿತ್ತು. ಆದರೆ, ಇಂದಿನ ಒತ್ತಡದ ದಿನಚರಿ, ಅಧಿಕ ಜಂಕ್ಫುಡ್ ಸೇವನೆ, ವ್ಯಾಯಾಮ ರಹಿತ ಜೀವನದಿಂದಾಗಿ ಪ್ರಸ್ತುತ 40 ವರ್ಷದೊಳಗಿನ ಹಾಗೂ ಹದಿಹರೆಯದ ಯುವಕರೂ ಸಹ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ಅನೇಕ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಆರೈಕೆ ನೀಡಿ ಗುಣಪಡಿಸಲಾಗಿದೆ ಎಂದು ತಿಳಿಸಿದರು.
ಡಾ. ವಿವೇಕ ಪಾಟೀಲ, ಪ್ರಭು ನವಲಗುಂದಮಠ, ಜಯತೀರ್ಥ ಕಟ್ಟಿ, ಇತರರು ಇದ್ದರು.
ಆಸ್ಪತ್ರೆ ಆವರಣದಿಂದ ಪ್ರಾರಂಭವಾದ ವಾಕಥಾನ್ ವಿದ್ಯಾನಗರ ಶಿರೂರು ಪಾರ್ಕ್, ಆರ್ಟ್ಸ್ ಕಾಲೇಜ್, ಕಿಮ್ಸ್ ಆಸ್ಪತ್ರೆ, ಎಂವಿಪಿ ಮುಂದೆ ಸಾಗಿ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದ ಮೂಲಕ ಸಂಚರಿಸಿ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಗೊಂಡಿತು.