

ಬೇಲೂರು: ಜಿಲ್ಲೆಯಲ್ಲಿ ಹೆಚ್ಚು ಹೃದಯಾಘಾತವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಜು.15ರಂದು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣ ಬಳಿ ವಾಕಥಾನ್‌ಗೆ ಚಾಲನೆ ನೀಡಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮನವಿ ಮಾಡಿದರು.
ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯ ಗೆಲ್ಲೋಣ.. ಘೋಷವಾಕ್ಯದಡಿ ಆಯೋಜಿಸಲ್ಪಟ್ಟ ವಾಕಥಾನ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಹೆಚ್ಚು ಯುವಕರು ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಆದರೆ ನಮ್ಮ ಜೀವನ ಶೈಲಿ, ಒತ್ತಡದಿಂದ ಹೊರಬಂದು ಸುಖ ಜೀವನ ನಡೆಸಲು ಈ ವಾಕಥಾನ್ ಪ್ರಯೋಜಕಾರಿಯಾಗಲಿದ್ದು, ಜು.15 ರಂದು ಮುಂಜಾನೆ 6.30 ಕ್ಕೆ ಚಾಲನೆ ದೊರೆಯಲಿದೆ ಎಂದರು.
ಚನ್ನಕೇಶವ ದೇಗುಲದಿಂದ ಆರಂಭವಾಗುವ ವಾಕಥಾನ್ ಕೆಂಪೇಗೌಡ, ಹರ್ಡೀಕರ್, ಬಸವೇಶ್ವರ ವೃತ್ತ ಮಾರ್ಗವಾಗಿ ಮುಖ್ಯರಸ್ತೆ ಮೂಲಕ ಯಗಚಿ ಸೇತುವೆಯ ಬಾಲಗಂಗಾಧರನಾಥ ಪ್ರತಿಮೆವರೆಗೆ ಸಾಗಿ ಅಲ್ಲಿ ಅಂತ್ಯಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಹಾಗೂ ಸೇವಾ ಸಂಸ್ಥೆ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಪ್ರಕರಣಗಳ ನಿಯಂತ್ರಣಕ್ಕಾಗಿ ಹತ್ತಾರು ಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಹೃದಯಕ್ಕಾಗಿ ಹೆಜ್ಜೆ ಹಾಕೋಣ ಎಂಬ ಘೋಷ ವಾಕ್ಯದಡಿ ವಾಕಥಾನ್ ಆಯೋಜಿಸಲಾಗಿದೆ. ಈ ಜಾಥಾದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಕಸಾಪ ಅಧ್ಯಕ್ಷ ಮಂಜೇಗೌಡ, ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕೆ.ಎಸ್.ಸುರೇಶ್, ಕೃಷಿ ಇಲಾಖೆ ಎಡಿ ತೇಜಸ್ವಿ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.