

ಮಂಡ್ಯ: ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಬೆಳೆಸುವ ಚಟುವಟಿಕೆಯನ್ನು ಹಲವು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ವಿದ್ಯುತ್ ಬಳಕೆ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸಲು ವಾಕಥಾನ್ ಆಯೋಜಿಸಲಾಗಿತ್ತು.
ಕಾಲೇಜಿನ ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ವಿಭಾಗವು ಬ್ಯೂರೋ ಆ್ ಎನರ್ಜಿ ಎಫಿಶಿಯನ್ಸಿ(ಬಿಇಇ) ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ(ಕೆಆರ್‌ಇಡಿಎಲ್) ಸಹಯೋಗದಲ್ಲಿ ‘ವಿದ್ಯುತ್ ಶಕ್ತಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ವಿದ್ಯುತ್ ಶಕ್ತಿ ಸಂರಕ್ಷಣೆ, ವಿದ್ಯುತ್ ಉಪಕರಣಗಳ ಬಳಕೆ, ಸೌರ ಶಾಖ ಮತ್ತು ಬೆಳಕಿನ ಉಪಕರಣಗಳ ಬಳಕೆ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ರ‌್ಯಾಲಿ ನಡೆಸಿದರು. ಮಾತ್ರವಲ್ಲದೆ ಸಾರ್ವಜನಿಕರಿಗೆ ವಿದ್ಯುತ್ ಶಕ್ತಿ ಸಂರಕ್ಷಣಾ ಸಲಹೆಗಳ ಕುರಿತು ಕರಪತ್ರ ವಿತರಿಸಲಾಯಿತು.
ವಾಕಥಾನ್‌ಗೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಲ್.ಮುರುಳಿಕೃಷ್ಣ ಹಾಗೂ ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಇಇ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮಹೇಶ್‌ಕುಮಾರ್ ಚಾಲನೆ ನೀಡಿದರು. ಡಾ.ಎನ್.ಎಲ್ಮುರಳಿಕೃಷ್ಣ ಮಾತನಾಡಿ, ಭವಿಷ್ಯದ ಅಗತ್ಯಗೆ ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕಾಗಿ ಶಕ್ತಿ ಸಂರಕ್ಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಾಕಥಾನ್ ತಾಂತ್ರಿಕ ಅಧಿವೇಶನ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ಶಿವರಾಮಕೃಷ್ಣ ದಾಸಿಕ, ನವೀಕರಿಸಬಹುದಾದ ಇಂಧನ ಮೂಲ ಮತ್ತು ಅವುಗಳ ಅನ್ವಯ, ಶಕ್ತಿ ಸಂರಕ್ಷಣಾ ಹಂತಗಳು ಹಾಗೂ ನೀತಿಗಳ ಕುರಿತು ವಿಷಯ ಮಂಡಿಸಿದರು.