

ಮುಂಡರಗಿ: ಗ್ರಾಮೀಣ ಭಾಗದಲ್ಲಿ ಕೃಷಿ ಅವಲಂಬಿತರೇ ಹೆಚ್ಚು. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಬೆಳಗ್ಗೆ ಮತ್ತು ಸಂಜೆ ಸಮಯ ನಿಗದಿಪಡಿಸಿಕೊಂಡು ಮತದಾರರನ್ನು ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ.
ಕೃಷಿಯನ್ನೇ ನೆಚ್ಚಿಕೊಂಡಿರುವ ಮತದಾರರು ದಿನದ ಹೆಚ್ಚು ಸಮಯವನ್ನು ಜಮೀನಿನಲ್ಲೇ ಕಳೆಯುತ್ತಾರೆ. ಇದರಿಂದ ಮನೆ- ಮನೆಗೆ ತೆರಳಿ ಪ್ರಚಾರ ಮಾಡುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸಮಯ ಹೊಂದಿಸಿಕೊಂಡು ಬೆಳಗ್ಗೆ ಮತ್ತು ಸಂಜೆ ಪ್ರಚಾರ ಕಾರ್ಯ ನಡೆಸಿದ್ದಾರೆ. ಪ್ರತಿದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮನೆ- ಮನೆಗೆ ತೆರಳಿ ಮತ ಯಾಚನೆ ಅದೇ ರೀತಿ ಸಂಜೆ 7ರಿಂದ ರಾತ್ರಿ 10 ರವರೆಗೆ ಮನೆ-ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ.
ಹೊಲದಲ್ಲಿ ಮತಯಾಚನೆ
ಬೆಳಗ್ಗೆ ಮತ್ತು ಸಂಜೆ ಸಮಯ ಹೊರತುಪಡಿಸಿ ಅಭ್ಯರ್ಥಿಗಳು ಚುನಾವಣೆ ಸಿದ್ಧತೆ ಜೋರಾಗಿ ನಡೆಸಿದ್ದಾರೆ. ಗ್ರಾಮದ ದೇವಸ್ಥಾನ, ಅಗಸಿ ಕಟ್ಟೆ, ಅರಳಿ ಕಟ್ಟೆಗಳ ಮೇಲೆ ಕುಳಿತಿದ್ದ ವೃದ್ಧರಿಗೆ, ಹಿರಿಯರಿಗೆ ಕರಪತ್ರದಲ್ಲಿನ ತಮ್ಮ ಚಿಹ್ನೆ ತೋರಿಸಿ ಈ ಗುರುತಿಗೆ ಮತ ಹಾಕಿ ನಮ್ಮನ್ನು ಗೆಲ್ಲಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಜತೆಗೆ ಕೆಲ ಅಭ್ಯರ್ಥಿಗಳು ಮಧ್ಯಾಹ್ನದ ಹೊತ್ತಿಗೆ ಜಮೀನುಗಳಿಗೆ ತೆರಳಿ ಅಲ್ಲಿರುವ ರೈತರು ಮತ್ತು ಕಾರ್ವಿುಕರನ್ನು ಭೇಟಿ ಮಾಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಮತದಾರರ ಸಂಪರ್ಕ
ಬಹುತೇಕ ಕಡೆಗಳಲ್ಲಿ ಆಯಾ ವಾರ್ಡಿನ ಮತದಾರರು ಬೇರೆ ಕಡೆಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಅಂಥವರ ಮೊಬೈಲ್ ಫೋನ್ ನಂಬರ್ ಪಡೆದು ಆ ಮೂಲಕ ಸಂರ್ಪಸಿ ನೀವು ಊರಿಗೆ ಬಂದು ನಮಗೆ ಮತ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತ ಹೊಂದಿ ಪಟ್ಟಣ ಸೇರಿ ತಾಲೂಕಿನ ಬೇರೆ ಕಡೆಗಳಲ್ಲಿ ವಾಸವಿರುವವರನ್ನು ಭೇಟಿ ಮಾಡಿ ಕರಪತ್ರ ನೀಡಿ ಮತ ಯಾಚಿಸುತ್ತಿದ್ದಾರೆ. ಉದ್ಯೋಗ ಅರಸಿ ರಾಜ್ಯದ ವಿವಿಧೆಡೆ, ಬೇರೆ ರಾಜ್ಯಗಳಿಗೆ ದುಡಿಯುವುದಕ್ಕೆ ಹೋದವರನ್ನು ಕೂಡ ದೂರವಾಣಿ ಮೂಲಕ ಸಂರ್ಪಸಿ ಊರಿಗೆ ಬಂದು ಮತ ಹಾಕುವಂತೆ ಕೋರುತ್ತಿದ್ದಾರೆ.
ಅಕ್ರಮ ತಡೆಗಟ್ಟಲು ತಂಡ ರಚನೆ
ಎರಡನೇ ಹಂತದ ಗ್ರಾ.ಪಂ. ಚುನಾವಣೆ ಡಿ. 27ರಂದು ನಡೆಯಲಿದೆ. ಹೀಗಾಗಿ ಡಿ. 25ರ ಸಂಜೆ 5 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಅಭ್ಯರ್ಥಿಗಳು 5 ಜನಕ್ಕಿಂತ ಹೆಚ್ಚು ಸೇರದೆ ಕೇವಲ ಮನೆ- ಮನೆಗೆ ತೆರಳಿ ಮತಯಾಚನೆ ಮಾಡಬಹುದು.
ಚುನಾವಣೆ ಬಂದರೆ ಸಾಕು ಮದ್ಯ, ಮಾಂಸ ಸೇವನೆ ಹೆಚ್ಚು ನಡೆಯುತ್ತದೆ. ಇನ್ನು ಹಳ್ಳಿಗಳಲ್ಲಿ ಮತದಾನದ ಹಿಂದಿನ ದಿನದ ರಾತ್ರಿಯನ್ನು ಕತ್ತಲ ರಾತ್ರಿ ಎಂದೇ ಕರೆಯುತ್ತಾರೆ. ಅಂದು ರಾತ್ರಿ ಕೆಲವರು ಮದ್ಯ, ಹಣ ಹಂಚುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಅಂತಹ ಅಕ್ರಮ ತಡೆಗಟ್ಟಲು ತಾ.ಪಂ. ಇಒ ನೇತೃತ್ವದಲ್ಲಿ ಸಿಪಿಐ, ಇಬ್ಬರು ಅಬಕಾರಿ ಅಧಿಕಾರಿ, ಇಬ್ಬರು ಕಂದಾಯ ನೀರಕ್ಷಕರು ಸೇರಿ 6 ಜನ ಅಧಿಕಾರಿಗಳ ತಂಡ ರಚಿಸಲಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿರುವ ತಾಲೂಕಿನ ಹಳ್ಳಿಕೇರಿ, ಹಿರೇವಡ್ಡಟ್ಟಿ ಹಾಗೂ ಕೊರ್ಲಹಳ್ಳಿ ಗ್ರಾಮದಲ್ಲಿನ ಮದ್ಯದ ಅಂಗಡಿಗಳನ್ನು ಡಿ. 25ರ ಸಂಜೆ 5 ರಿಂದ 48 ಗಂಟೆಗಳವರೆಗೆ ಬಂದ್ ಮಾಡುವುದಕ್ಕೆ ತಾಲೂಕು ಆಡಳಿತದಿಂದ ಆದೇಶ ಮಾಡಲಾಗಿದೆ.
ಡಿ. 25ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, 48 ಗಂಟೆಗಳವರೆಗೆ ಗ್ರಾಮೀಣ ಭಾಗದ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಡಿ. 27ರಂದು ಮತದಾನ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆ ಎಲ್ಲಾದರೂ ಹಣ, ಮದ್ಯ ಹಂಚುವುದರ ಬಗ್ಗೆ ಮಾಹಿತಿ ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲು ತಾ.ಪಂ. ಇಒ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.| ಆಶಪ್ಪ ಪೂಜಾರಿ ತಹಸೀಲ್ದಾರ್ ಮುಂಡರಗಿ