ನೆರೆ ಪರಿಹಾರ ಹಣ ದುರುಪಯೋಗ ಖಂಡಿಸಿ ಪಾದಯಾತ್ರೆ

2KDR3
ನೆರೆ ಪರಿಹಾರದ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ರೈತರು ಪಾದಾಯಾತ್ರೆ ಆರಂಭಿಸಿದರು.
Published on

ಕಡೂರು: ತಾಲೂಕಿನ ಕಲ್ಕರೆ ಗ್ರಾಮದ ರೈತರಿಗೆ ವಿತರಣೆಯಾಗಬೇಕಿದ್ದ ನೆರೆ ಪರಿಹಾರದ ಹಣವನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದೊಂದಿಗೆ ಶುಕ್ರವಾರ ಗ್ರಾಮಸ್ಥರು ಕಲ್ಕರೆ ಗ್ರಾಮದಿಂದ ಕಡೂರು ಪಟ್ಟಣದ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ಆರಂಭಿಸಿದರು.
ಸುಮಾರು 100ಕ್ಕೂ ಅಧಿಕ ರೈತರು ಒಳಗೊಂಡ ಪಾದಯಾತ್ರೆ ಅಂತರಘಟ್ಟೆ, ಹಡಗಲು, ಕಳ್ಳಿಹೊಸಳ್ಳಿ, ಬಿಸಲೆರೆ, ಅರೇಹಳ್ಳಿ, ಬಾಸೂರು, ಚಿಕ್ಕಬಾಸೂರು, ಕಲ್ಲಾಪುರ ಮಾರ್ಗವಾಗಿ ಕಡೂರು ಪಟ್ಟಣಕ್ಕೆ ರಾತ್ರಿ 8 ಗಂಟೆಗೆ ತಲುಪಿತು. ಪಾದಾಯಾತ್ರೆ ಮಾರ್ಗದುದ್ದಕ್ಕೂ ಅಕ್ರಮ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಮಧ್ಯವರ್ತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಾ ಹೆಜ್ಜೆಹಾಕಿದರು. ಶನಿವಾರ ಬೆಳಗ್ಗೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸಮಿತಿಯ ವರದಿಯಲ್ಲಿ ನೀಡಿರುವ ತಪ್ಪಿತಸ್ಥ ಅಕಾರಿಗಳ ಬಂಧನವಾಗಬೇಕಿದೆ. ಅಲ್ಲಿಯವರೆಗೆ ತಾಲ್ಲೂಕು ಕಚೇರಿಯಲ್ಲಿ ಪ್ರತಿಭಟನೆ ಮುಂದುವರೆಸಲಾಗುತ್ತದೆ. ನಂತರ ನ್ಯಾಯಯುತ ಪರಿಹಾರವನ್ನು ರೈತರಿಗೆ ದೊರಕಬೇಕು ಎಂಬುವುದು ನಮ್ಮ ಹಕ್ಕೋತ್ತಾಯವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ತಿಳಿಸಿದರು.
ಕರ್ನಾಟಕ ರೈತ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಫೈಯೋಜ್, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್, ರವಿಕುಮಾರ್, ಗ್ರಾಮದ ಮುಖಂಡರಾದ ಯತೀಶ್, ಶಶಿಧರ್, ಪ್ರಭು, ಕನ್ಯಾನಾಯ್ಕಾ, ಲಕ್ಷ್ಮಣ್, ಕುಮಾರಪ್ಪ, ಆನಂದ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net