

ವಿಜಯವಾಣಿ ಸುದ್ದಿಜಾಲ ಗುಬ್ಬಿ
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಹೋರಾಟ ತೀವ್ರಗೊಳಿಸಲು ರ್ನಿಣಯ ಕೈಗೊಳ್ಳಲಾಗಿದೆ. ಲಿಂಕ್ಕೆನಾಲ್ ಪೈಪ್ ಅಳವಡಿಕೆ ಕಾಮಗಾರಿಯನ್ನು ಸದ್ದಿಲ್ಲದೆ ಪೊಲೀಸ್ ಸರ್ಪಗಾವಲಿನಲ್ಲಿ ಆರಂಭಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹೇಮಾವತಿ ನೀರಾವರಿ ಹೋರಾಟ ಸಮಿತಿ ತುರ್ತು ಸಭೆ ನಡೆಸಿ ನ.15 ರಂದು ಲಿಂಕ್ ಕೆನಾಲ್ ಆರಂಭದ ಸ್ಥಳದಿಂದ ಪಾದಯಾತ್ರೆ, ಟ್ರಾ$್ಯಕ್ಟರ್ ರ್ಯಾಲಿ ಹೋರಾಟ ಹಮ್ಮಿಕೊಳ್ಳಲು ರ್ನಿಣಯ ಕೈಗೊಳ್ಳಲಾಯಿತು.
ಪ್ರಸ್ತುತ ಹೇಮಾವತಿ ತುಮಕೂರು ಶಾಖಾ ನಾಲೆ ಆಧುನೀಕರಣಗೊಂಡಿರುವ ಹಿನ್ನೆಲೆ ಕುಣಿಗಲ್ ಭಾಗಕ್ಕೆ ನೈಸರ್ಗಿಕವಾಗಿ ನೀರು ತೆಗೆದುಕೊಂಡು ಹೋಗಲು ಜಿಲ್ಲೆಯ ಜನರ ಯಾವುದೇ ತಕರಾರಿಲ್ಲ. ಆದರೆ, ಸರ್ಕಾರ ಉದ್ದೇಶಪೂರ್ವಕವಾಗಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವ ಹುನ್ನಾರ ನಡೆಸುತ್ತಿದೆ ಎಂದು ಹೋರಾಟ ಸಮಿತಿ ಸಂಚಾಲಕ, ಮಾಜಿ ಸಚಿವ ಸೊಗಡುಶಿವಣ್ಣ ಕಿಡಿಕಾರಿದರು.
ರೈತರನ್ನು ಎದುರು ಹಾಕಿಕೊಂಡು ಸರ್ಕಾರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವಿಕತೆಯನ್ನು ಅರಿತು ಎಲ್ಲರಿಗೂ ಅನುಕೂಲವಾಗುವಂತೆ ಯೋಜನೆ ಕೈಗೊಳ್ಳಬೇಕಿರುವ ಸರ್ಕಾರವೇ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು ದುರದೃಷ್ಟಕರ. ಹೇಮೆ ಲಿಂಕ್ ಕೆನಾಲ್ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಶಿವಣ್ಣ ಎಚ್ಚರಿಸಿದರು
ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿದರೆ ಯಾವುದೇ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಹೋರಾಟಗಾರರ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಂಡು ಎದುರಿಸಲು ಸಿದ್ಧರಿದ್ದೇವೆ. ರೈತರಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಿದ್ಧರಾಗೋಣ. ತುರುವೇಕೆರೆ ಮತ್ತು ಗುಬ್ಬಿ ತಾಲೂಕಿನ ಸಹಸ್ರಾರು ರೈತರನ್ನು ಸೇರಿಸಿ ಲಿಂಕ್ಕೆನಾಲ್ ಆರಂಭವಾಗುವ ಶಾಖಾ ನಾಲೆಯ 70ನೇ ಕಿ.ಮೀ.,ಯಿಂದ ಪಾದಯಾತ್ರೆ, ಟ್ರಾಕ್ಟರ್ ರ್ಯಾಲಿ ಮಾಡಿ ಹೋರಾಟವನ್ನು ತೀವ್ರಗೊಳಿಸೋಣ. ತಡೆಯಲು ಬಂದವರಿಗೆ ಎಡೆ ಮಟ್ಟೆ ರುಚಿ ತೋರಿಸೋಣ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಲಿಂಕ್ಕೆನಾಲ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಹೇಳುವ ಶಾಸಕ ಎಸ್.ಆರ್.ಶ್ರೀನಿವಾಸ್ ಹೋರಾಟದ ಮಂಚೂಣಿವಹಿಸಲಿ. ಕಾಮಗಾರಿ ನಿಲ್ಲಿಸಲು ಮುಂದಾಗದಿದ್ದರೆ ಸಹಸ್ರಾರು ಸಂಖ್ಯೆಯಲ್ಲಿ ರೈತರನ್ನು ಒಟ್ಟುಗೂಡಿಸಿ ಟ್ರಾ$್ಯಕ್ಟರ್ ಹಾಗೂ ಎತ್ತಿನಬಂಡಿಗಳನ್ನು ತಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು. ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಬಿಜೆಪಿ ಮುಖಂಡರಾದ ಎಚ್.ಟಿ.ಬೈರಪ್ಪ, ರೈತ ಸಂದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಶಂಕರ್ಕುಮಾರ್ ಇದ್ದರು.
ಲಿಂಕ್ ಕೆನಾಲ್ ವಿರುದ್ಧ ರೈತ ಸಂ ಸದಾ ಹೋರಾಟಕ್ಕೆ ಸಿದ್ಧವಿದೆ. ರಾಜಕೀಯ ಮುಖಂಡರು ಹೋರಾಟದ ನೇತೃತ್ವವಹಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಹೋರಾಟ ಮಾಡಲಾಗುವುದು. ಯಾವುದೇ ಕಾರಣಕ್ಕೂ ಜಿಲ್ಲೆಯ ಜನತೆ ಪಾಲಿಗೆ ಮರಣಶಾಸನವಾಗಿರುವ ಲಿಂಕ್ ಕೆನಾಲ್ ನಿರ್ಮಾಣ ಮಾಡಲು ಬಿಡುವುದಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಾಮಗಾರಿಯನ್ನು ನಿಲ್ಲಿಸದೆ ಇದ್ದರೆ ಉಗ್ರ ಹೋರಾಟ ಅನಿವಾರ್ಯ. | ಎ.ಗೋವಿಂದರಾಜು, ಜಿಲ್ಲಾಧ್ಯಕ್ಷ, ರೈತ ಸಂಘ