

ಜಮಖಂಡಿ: ನಮ್ಮ ದೇಶ ಸುಭದ್ರ ಹಾಗೂ ಸಮೃದ್ಧಿಯಾಗಿ ಬೆಳೆಯಲು ಮೂಲ ಆಧಾರ ಸ್ತಂಭ ಸಂವಿಧಾನ. ಸಂವಿಧಾನದ ಆಶಯಗಳನ್ನು ಅರಿತುನಡೆಯಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.
ತಾಲೂಕಿನ ಕೊಣ್ಣೂರ ಮತ್ತು ಲಿಂಗನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂವಿಧಾನ ಪ್ರತಿಯೊಬ್ಬರನ್ನು ಸಮಾನವಾಗಿ ನೋಡುತ್ತದೆ. ಪ್ರತಿಯೊಬ್ಬರಿಗೂ ಅವಕಾಶಗಳನ್ನು ನೀಡಿದೆ. ಅರ್ಹತೆ ಆಧಾರದ ಮೇಲೆ ನೀವು ಸಾಧನೆ ಮಾಡಬೇಕು ಎಂದರು.
ತಾಪಂ ಇಒ ಸಂಜೀವ ಜಿನ್ನೂರ ಮಾತನಾಡಿ, ಸಂವಿಧಾನ ಎಂತಹ ಕಾನೂನುಗಳಿಂದ ತಯಾರಾಗಿದೆ ಎಂಬುದಕ್ಕಿಂತ ಅದನ್ನು ಬಳಕೆ ಮಾಡಿಕೊಳ್ಳುವವರು ಗುಣವಂತರಿದ್ದರೆ ಶ್ರೇಷ್ಠ ಸಂವಿಧಾನವಾಗುತ್ತದೆ. ಕೆಟ್ಟವರಾದರೆ ಅಸಮರ್ಥವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ನಾವು ಶ್ರೇಷ್ಠ ಸಂವಿಧಾನ ಮಾಡಿ ತೋರಿಸಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ. ವಿವಿಧ ದೇಶದ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಜೇನುಹುಳು ಹೂವಿನ ಮಕರಂದವನ್ನು ತಂದು ಸಿಹಿ ಜೇನು ತಯಾರಿಸಿದಂತೆ ಅಂಬೇಡ್ಕರ್ ಭಾರತಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ಮಕ್ಕಳಿಗೆ ಪ್ರಬಂಧ, ರಂಗೋಲಿ, ಭಾಷಣ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು. ವಿದ್ಯಾರ್ಥಿಗಳು, ಕುಂಭಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ನೀಡಿದರು. ಮರೆಗುದ್ದಿ, ಹುಲ್ಯಾಳ, ಸಿದ್ದಾಪುರ ಗ್ರಾಪಂನಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಬಿಇಒ ಅಶೋಕ ಬಸಣ್ಣವರ ಸಂವಿಧಾನದ ಪೀಠಿಕೆ ವಾಚಿಸಿದರು. ಸಮಾಜ ಕಲ್ಯಾಣ ಇಲಾಖೆ ಸಿ.ಎಸ್. ಗಡದೇವರಮಠ, ತಾಲೂಕು ವೈದ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಬಿಸಿಎಂ ಇಲಾಖೆಯ ರಾಮಲಿಂಗ ಬೈರವಾಡಿ, ಅಲ್ಪಸಂಖ್ಯಾತ ಇಲಾಖೆ ಸಂತೋಷ ಬಾಡಗಿ, ನ್ಯಾಯವಾದಿ ನಿಂಗಪ್ಪ ಗಸ್ತಿ, ಲಿಂಗನೂರ ಗ್ರಾಪಂ ಅಧ್ಯಕ್ಷೆ ಮಹಾದೇವಿ ಕರಿಗಾರ, ಕೊಣ್ಣೂರ ಗ್ರಾಪಂ ಅಧ್ಯಕ್ಷೆ ಸರಸ್ವತಿ ನರಸಪ್ಪನವರ, ಪಿಡಿಒ ಎಸ್.ಆರ್. ಬಿರಾದಾರ, ಸಿದ್ದು ಎಣ್ಣಿ, ಕರೆಪ್ಪ ಹುಣಸಿಕಟ್ಟಿ, ಕೆ.ಎಸ್. ಅಗಸನವರ, ಹೂವಪ್ಪ ಉಷಾಕರ, ವಿಶಾಲ ಧರಿಯಪ್ಪಗೋಳ ಇತರರಿದ್ದರು.