

ಹುಬ್ಬಳ್ಳಿ:ಸವಿತಾ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ 1 ಅಥವಾ 1ಎ ಗೆ ಸೇರ್ಪಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಾಜದ ಜನರು ಸೋಮವಾರ ಹುಬ್ಬಳ್ಳಿಯಿಂದ ಬೆಳಗಾವಿಗೆ ಪಾದಯಾತ್ರೆ ಆರಂಭಿಸಿದರು.
ಅರವಿಂದ ನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊಂಚೂರು ಸವಿತಾಪೀಠದ ಶ್ರೀ ಸವಿತಾನಂದನಾಥ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತದವರೆಗೆ ಆಗಮಿಸಿ ಬೇಡಿಕೆಗಳ ಕುರಿತು ಘೊಷಣೆ ಕೂಗಿದರು.
ಶ್ರೀ ಸವಿತಾನಂದನಾಥ ಸ್ವಾಮೀಜಿ ಮಾತನಾಡಿ, ಸವಿತಾ ಸಮಾಜಕ್ಕೆ ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪ್ರವರ್ಗ 1ರ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯದಲ್ಲೂ ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬೇಕೆಂದು ಆಗ್ರಹಿಸಿ ಇಂದು ಪಾದಯಾತ್ರೆ ಆರಂಭಿಸಿ ಡಿ. 13ರಂದು ಸುವರ್ಣ ವಿಧಾನಸೌಧ ತಲುಪಿ, 14ರಿಂದ ಅಧಿವೇಶನ ಮುಗಿಯುವವರೆಗೆ ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವುದಿಲ್ಲ ಎಂದರು.
ಕ್ಷೌರಿಕ ವೃತ್ತಿ ನಿಂದನೆ ಹಾಗೂ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಬೇಕು. ಜಾತಿಗಣತಿ ವರದಿ ಆಧರಿಸಿ ಮೀಸಲಾತಿ ನಿಗದಿಗೊಳಿಸಬೇಕು. ಸವಿತಾ ರತ್ನ ಪ್ರಶಸ್ತಿ ನೀಡಬೇಕು. ಡಿ.11 ಮತ್ತು 12ರಂದು ಹುಬ್ಬಳ್ಳಿಯಲ್ಲಿ ಕ್ಷೌರದಂಗಡಿಗಳು ಬಂದ್ ಇರಲಿವೆ ಎಂದು ತಿಳಿಸಿದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾ ಉಪ್ಪೇರ, ರಾಜ್ಯ ಘಟಕದ ಉಪಾಧ್ಯಕ್ಷ ರಮೇಶ ಶಾಬಾದ್, ತಾಲೂಕು ಘಟಕದ ಅಧ್ಯಕ್ಷ ರಘುನಾಥ ನಾರಾಯಣದಾಸ, ಇತರರು ಇದ್ದರು.