ಖಾದಿ ಬಾವುಟದ ಉಳಿವಿಗಾಗಿ ಪಾದಯಾತ್ರೆ

IMG_5056 - Copy
Published on

ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ವಿರೋಧ

ಮೈಸೂರು: ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿರುವುದನ್ನು ಖಂಡಿಸಿ ಖಾದಿ ಬಾವುಟದ ಉಳಿವಿಗಾಗಿ ನಾಗರಿಕ ಸಮಿತಿ ಹಮ್ಮಿಕೊಂಡಿರುವ ‘ನಮ್ಮ ಧ್ವಜ ಸತ್ಯಾಗ್ರಹ’ದ ಅಂಗವಾಗಿ ಭಾನುವಾರ ಪಾದಯಾತ್ರೆ ನಡೆಯಿತು.


ಗಾಂಧಿ ಚೌಕದಿಂದ ಆರಂಭವಾದ ಪಾದಯಾತ್ರೆಯಲ್ಲಿ ಕಲಾವಿದರು, ರಂಗಕರ್ಮಿಗಳು ಹೆಜ್ಜೆಹಾಕಿದರು. ಚಿಕ್ಕಗಡಿಯಾರ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಮೂಲಕ ಸಾಗಿ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಂಡರು.


ಸ್ವಾತಂತ್ರ್ಯ ಚಳವಳಿಯಲ್ಲಿ ಹರ್-ಘರ್-ತಿರಂಗಾ (ಮನೆ ಮನೆಯಲ್ಲಿ ಸ್ವದೇಶಿ ಬಾವುಟ ಹಾರಾಡಲಿ) ಮೊಳಗಿದ ಘೋಷಣೆ ತತ್ವದ ವಿರುದ್ಧವಾಗಿ ಚೈನಾ ವಿದೇಶಿ ಬಾವುಟವನ್ನು ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ವಿಡಂಬನೆಯಾಗಿದೆ ಎಂದು ಖಂಡಿಸಿದರು.


ಇಂದು ಇಡೀ ಸ್ವದೇಶಿ ಆರ್ಥಿಕತೆಯೇ ಕುಸಿದಿದೆ. ಖಾದಿ ಉತ್ಪಾದನೆ ಭಾಗಶಃ ಸ್ಥಗಿತಗೊಂಡಿದೆ. ಕರ್ನಾಟಕದ ಚಿತ್ರದುರ್ಗ ನಗರದ ಬಳಿಯಿದ್ದ ಅರಳೆ ಹಂಜಿ ತಯಾರಿಕಾ ಕೇಂದ್ರ ಬಂದ್ ಆಗಿದೆ. ಸಾವಿರಾರು ನೂಲುವ ಕೇಂದ್ರಗಳು ಹಾಗೂ ಲಕ್ಷಾಂತರ ಚಾಲ್ತಿ ಕೈ ಮಗ್ಗಗಳು ದೇಶಾದ್ಯಂತ ಸ್ಥಗಿತಗೊಂಡಿವೆ.


ಖಾದಿ ಸಂಸ್ಥೆಗಳೇ ಖಾದಿಯಲ್ಲದ ವಸ್ತ್ರವನ್ನು ಬಳಸಿ, ಧ್ವಜಗಳನ್ನು ಉತ್ಪಾದಿಸಬೇಕಾದ ದಾರುಣ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ದುರಂತಮಯ ಸಂದರ್ಭದಲ್ಲಿ ನಾವು ವಿದೇಶದಿಂದ ಆಮದಾದ ಬಾವುಟ ಅಥವಾ ದೇಸಿ ಉದ್ದಿಮೆ ಉತ್ಪಾದಿಸಿದ ಸಿಂಥೆಟಿಕ್ ಬಾವುಟ ಹಾರಿಸಿ ಹಬ್ಬ ಆಚರಿಸುತ್ತಿರುವುದು ಪರಿಸ್ಥಿತಿಯ ವಿಡಂಬನೆಯಲ್ಲವೆ? ಇದು ಭಾರತವನ್ನು ನಾಚಿಸುವಂತಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ, ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ, ನಾಗರಿಕ ಸಮಿತಿ ಸಂಚಾಲಕ ಕಾಳಚನ್ನೇಗೌಡ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ನಟ ಚಂದನ್ ಆಚಾರ್, ಜಿ.ಪಿ. ಬಸವರಾಜ್, ಲೀಲಾ ಪ್ರಕಾಶ್ ಇತರರಿದ್ದರು.

ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಮಾತನಾಡಿ, ದೇಶವು ಗಾಂಧಿ ಭಾರತವಾಗಿ ಉಳಿದಿಲ್ಲ. ವ್ಯಾಪಾರಿ ಧೋರಣೆಯ ಸರ್ಕಾರವು ಆಳುತ್ತಿದೆ. ಬಾವುಟದಲ್ಲೂ ಕಮಿಷನ್ ಪಡೆಯಲು ಸರ್ಕಾರ ಮುಂದಾಗಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾದಿ ರಾಷ್ಟ್ರಧ್ವಜ ಸ್ವಾಭಿಮಾನದ ಸಂಕೇತವಾಗಿತ್ತು. ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ವಿದೇಶದಲ್ಲಿ ತಯಾರಾದ ಬಾವುಟಗಳು ಹಾರಲು ಅವಕಾಶ ಮಾಡಿಕೊಟ್ಟಿದೆ. ಗಾಂಧಿ ಅವರಿಗೆ ಮಾಡಿದ ಅವಮಾನವಿದು ಎಂದು ಬೇಸರ ವ್ಯಕ್ತಪಡಿಸಿದರು.


ರಂಗಕರ್ಮಿ ಪ್ರಸನ್ನ ಮಾತನಾಡಿ, ಖಾದಿ ನೂಲುವ ಕೇಂದ್ರಗಳು ಶಾಶ್ವತವಾಗಿ ಮುಚ್ಚಲು ಸರ್ಕಾರ ಕೈಗೊಂಡ ಕ್ರಮವಿದು. ಗ್ರಾಮೀಣ ಮಹಿಳೆಯರು, ಶ್ರಮಿಕರು ಕೆಲಸಕ್ಕಾಗಿ ಅಲೆಯಬೇಕಿದೆ. ದೇಶದ ರಾಜಕಾರಣ, ಆರ್ಥಿಕತೆಯು ವಿದೇಶದತ್ತ ಸಾಗಿದೆ ಎಂದರು.


ಸಾಮಾನ್ಯರನ್ನು ಕೊಂದು ಕೆಲವೇ ಜನರನ್ನು ವಿಶ್ವದ ಶ್ರೀಮಂತ ಬಂಡವಾಳಶಾಹಿಗಳನ್ನು ಮಾಡುವುದರಲ್ಲಿ ರಾಜಕಾರಣಿಗಳು ಸಂತೋಷ ಕಾಣುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net