ತುಂಗಭದ್ರಾ ನದಿ ಪಾವಿತ್ರತ್ಯೆಗಾಗಿ ಪಾದಯಾತ್ರೆ

23sri-1 (2)
ಶೃಂಗೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನ ನಾಗರಿಕರು ಭಾಗವಹಿಸಿದರು.
Published on

ಶೃಂಗೇರಿ: ಪಶ್ಚಿಮಘಟ್ಟ, ಪರಿಸರ, ನೀರು, ಕೃಷಿ, ಅರ್ಥಿಕ ಹಾಗೂ ಸಾಮಾಜಿಕ ಅಧ್ಯಯನ ನಡೆಸಲು ಪಶ್ಚಿಮಘಟ್ಟ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಲು ರಾಷ್ಟ್ರೀಯ ಸ್ವಾಭಿಮಾನ ಅಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನವೆಂಬರ್ 4ರಿಂದ ಶೃಂಗೇರಿಯಿಂದ ಕಿಷ್ಕಿಂದ ತನಕ ತುಂಗಭದ್ರಾ ನದಿ ಪಾವಿತ್ರತ್ಯೆಗಾಗಿ ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಿರ್ಮಲಾ ತುಂಗಭದ್ರಾ ಅಭಿಯಾನದ ಪ್ರಮುಖರಾದ ಬಿ.ಎಂ.ಕುಮಾರಸ್ವಾಮಿ ತಿಳಿಸಿದರು.
ಜ್ಞಾನ ಭಾರತೀವಿದ್ಯಾ ಕೇಂದ್ರದಲ್ಲಿ ಅಭಿಯಾನದಿಂದ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದ ಸಮೀಪ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತುಭದ್ರಾ ನದಿಗಳು ಶ್ರೀಕ್ಷೇತ್ರ ಕೂಡಲಿಯಲ್ಲಿ ಸಂಗವಾಗಿ ತುಂಗಾಭದ್ರಾ ನದಿಯಾಗಿ ಸುಮಾರು 400 ಕಿ.ಮೀ ತನಕ ಹರಿಯುತ್ತದೆ. ನದಿಯ ಪಾವಿತ್ರತ್ಯೆ ಕಾಪಾಡುವುದು ಮಲೆನಾಡಿಗರ ಪ್ರಮುಖ ಧ್ಯೇಯವಾಗಬೇಕು.ಅರಣ್ಯನಾಶದಿಂದ ನೀರು ಇಂಗುವಿಕೆ ಕಡಿಮೆಯಾಗಿ ಮಳೆಗಾಲದಲ್ಲಿ ಪ್ರವಾಹ ಹಾಗೂ ಬೇಸಿಗೆಯಲ್ಲಿ ಬರದ ಸಮಸ್ಯೆಗಳು ಎದುರಾಗುತ್ತಿದೆ. ನದಿಗಳಲ್ಲಿ ನೀರಿನ ಹರಿವು ಪ್ರಮುಖವಾಗಿದ್ದು ಗಣಿಗಾರಿಕೆಯಿಂದ ನದಿದಂಡೆ ಕೊರೆತ, ಜಲಚರ ಸಂತತಿ ನಾಶ ನಿರಂತರವಾಗಿ ನಡೆಯುತ್ತಿದೆ ಎಂದರು.
ಪಶ್ಚಿಮಘಟ್ಟ, ಪರಿಸರ, ನೀರು, ಕೃಷಿ, ಅರ್ಥಿಕ ಹಾಗೂ ಸಾಮಾಜಿಕ ಅಧ್ಯಯನ ನಡೆಸಲು ಪಶ್ಚಿಮಘಟ್ಟ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಅಂದೋಲನ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನವೆಂಬರ್ 4ರಿಂದ ಶೃಂಗೇರಿಯಿಂದ ಕಿಷ್ಕಿಂದ ತನಕ ತುಂಗಭದ್ರಾ ನದಿ ಪಾವಿತ್ರತ್ಯೆಗಾಗಿ ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಪ್ರಮುಖರಾದ ಶ್ರೀಪತಿರಾವ್, ಶಂಕರ್, ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಸಿ.ನಾಗೇಶ್, ಪಪಂ ಮಾಜಿ ಅಧ್ಯಕ್ಷ ಟಿ.ಕೆ.ಪರಾಶರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net