

ಲಕ್ಷ್ಮೇಶ್ವರ: ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರದ ಗಮನ ಸೆಳೆಯಲು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಕ್ಕಳ ಹಕ್ಕುಗಳ ಹೋರಾಟಗಾರ ಚನ್ನೇಶ ಜಕ್ಕಲಿ ಹಾಗೂ ಸ್ನೇಹಿತರು ಕನ್ಯಾಕುಮಾರಿಯಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದು, ಯಾತ್ರೆಯ ತಂಡ ಮಂಗಳವಾರ ಪಟ್ಟಣಕ್ಕೆ ಆಗಮಿಸಿತು.
ಸೆ.24ರಿಂದ ಕನ್ಯಾಕುಮಾರಿಯಿಂದ ಪಾದಯಾತ್ರೆ ಪ್ರಾರಂಭಿಸಲಾಗಿದೆ. 3,650 ಕಿ.ಮೀ ಪಾದಯಾತ್ರೆ ಇದಾಗಿದ್ದು ನಿತ್ಯ ಸರಾಸರಿ 40 ಕಿ.ಮೀ ಪಾದಯಾತ್ರೆ ಮಾಡುತ್ತಾರೆ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯದ ಮೂಲಕ 2024ರ ಜನವರಿ 5ರಂದು ದೆಹಲಿ ತಲುಪುವ ಗುರಿ ಹೊಂದಿದ್ದಾರೆ. ಯಾತ್ರೆಗೆ ದುಡಿಮೆಯ ಹಣದ ಜತೆಗೆ ಗೆಳೆಯರು, ದಾನಿಗಳ ಸಹಕಾರವೂ ಇದೆ.
ಭ್ರೂಣಕ್ಕೂ ಡಿಜಿಟಲ್ ಕೋಡ್: ‘ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಡಿಜಿಟಲ್ ಕೋಡ್ ನೀಡಬಹುದಾಗಿದ್ದು, ಶಿಶು ಜನಿಸಿದ ನಂತರ ಆಧಾರ್ ಕಾರ್ಡ್ ಸಹಿತ ಎಲ್ಲ ಯೋಜನೆಗಳ ಕಾರ್ಡ್‌ಗಳನ್ನು ನೇರವಾಗಿ ಮನೆಗೆ ಕಳುಹಿಸಬಹುದಾಗಿದೆ. ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನ ಸುಲಭವಾಗಿ ಮಾಡಬಹುದಾಗಿದೆ’ ಎಂದು ಚನ್ನೇಶ ಜಕ್ಕಲಿ ಪ್ರತಿಪಾದಿಸುತ್ತಾರೆ.
‘ಆರುಷಿ ಯೋಜನೆ ಸೇರಿ ಮಹತ್ವದ ಯೋಜನೆಗಳ ಸುಲಭ ಅನುಷ್ಠಾನಲ್ಲಾಗಿ ಪಾದಯಾತ್ರೆ ನಡೆಸುತ್ತಿರುವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.