

ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವೆಡೆ ವಕ್ಪ್ ಆಸ್ತಿ ಕಬಳಿಸಲು ಸಂಚು ನಡೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರದಿದ್ದರೆ ವಕ್ಪ್ ಬೋರ್ಡ್ ಮೂಲಕ ಆಸ್ತಿ ಕಬಳಿಸಿ, ತಮ್ಮ ತಮ್ಮ ಹೆಸರಿಗೆ ಮಾಡಿಕೊಳ್ಳುವ ತರಾತುರಿಯಲ್ಲಿ ಕಾಂಗ್ರೆಸ್ನವರು ಇದ್ದಾರೆ ಎಂದು ಹೇಳಿದರು.
ವಕ್ಪ್ ಆಸ್ತಿ ಕಬಳಿಸಲು ಆಯಾ ಕಾಂಗ್ರೆಸ್ ಸರ್ಕಾರಗಳೂ ಸಾಥ್ ನೀಡುತ್ತಿರುವಂತಿದೆ. ರೈತರ, ಹಿಂದುಗಳ, ಬಡ ಮುಸ್ಲಿಮರ ಮತ್ತು ದೇವಸ್ಥಾನಗಳ ಆಸ್ತಿ ವಶಪಡಿಸಿಕೊಳ್ಳಲು ಅದೇನು ಇವರಪ್ಪಂದೇ ? ಎಂದು ಜೋಶಿ ಕಿಡಿ ಕಾರಿದರು.
2013 ರಲ್ಲಿ ವಕ್ಪ್ಗೆ ಅಪರಿಮಿತವಾದ ಅಧಿಕಾರ ಕೊಡಲಾಗಿದೆ. ರೈತರ, ದೇವಸ್ಥಾನಗಳ ಆಸ್ತಿ ವಕ್ಪ್ಗೆ ಕೊಡಲು ಇವರು ಯಾರು ? ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು. 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನನ್ನು ವಕ್ಪ್ಗೆ ಕೊಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಸಚಿವ ಜೋಶಿ, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ವಿಜಯಪುರದಲ್ಲಿನ ರೈತರ ಆಸ್ತಿ ತನ್ನದೆನ್ನುತ್ತಿರುವ ವಕ್ಪ್, ಅಳ್ನಾವರದ ಪೊಲೀಸ್ ಠಾಣೆ, ಉಪ್ಪಿನಬೆಟಗೇರಿ ಸೇರಿದಂತೆ ಹಲವೆಡೆ ಹಿಂದುಗಳ, ರೈತರ, ದೇವಸ್ಥಾನಗಳ ಅಷ್ಟೇ ಅಲ್ಲ ಬಡ ಮುಸ್ಲಿಮರ ಆಸ್ತಿಯನ್ನೂ ತನ್ನದೆನ್ನುತ್ತಿದೆ. ಇದು ರಾಜ್ಯ ಸರ್ಕಾರ ಯಾವ ಮಟ್ಟದಲ್ಲಿ ತುಷ್ಟೀಕರಣದಲ್ಲಿ ತೊಡಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕ್ಪ್ ಆಸ್ತಿ ಕಬಳಿಸಲು ಅಲ್ಲಾನನ್ನು ಮುಂದಿಡುತ್ತಿದೆ. ಆದರೆ, ಅಲ್ಲಾ ಆಸ್ತಿ ಕಬಳಿಸಿ ಎಂದಿಲ್ಲ. ಅಲ್ಲಾ ಹೆಸರಲ್ಲಿ ಎಲ್ಲ ಬೋಗಸ್ ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಆಸ್ತಿ ತನ್ನದೆಂದು ವಕ್ಪ್ ಯಾರೊಬ್ಬರಿಗೂ ನೋಟಿಸ್ ನೀಡದಂತೆ ರಾಜ್ಯ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು. ಮೌಖಿಕ ಸೂಚನೆ, ಹೇಳಿಕೆಯನ್ನಲ್ಲ ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.
ದೇಶದಲ್ಲಿ ಇಂಥ ಅವಾಂತರ ತಡೆಯಲು ಕೇಂದ್ರ ಸರ್ಕಾರ ವಕ್ಪ್ ಕಾಯ್ದೆ ತಿದ್ದುಪಡಿಗೆ ಮುಂದಾದರೆ ಇದನ್ನೇಕೆ ಕಾಂಗ್ರೆಸ್ ಬೆಂಬಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ವಕ್ಪ್ ನೋಟಿಸ್ ನೋಡಿ ಜನ ದಂಗಾಗಿದ್ದಾರೆ. ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನೋಟಿಸ್ ನೀಡದಂತೆ ವಕ್ಪ್ ಗೆ ಆದೇಶ ನೀಡಬೇಕು. ಕೇಂದ್ರ ಜಾರಿ ತರಲು ಉದ್ದೇಶಿಸಿರುವ ವಕ್ಪ್ ಕಾಯ್ದೆ ತಿದ್ದುಪಡಿ ಬೆಂಬಲಿಸಬೇಕು ಎಂದು ಜೋಶಿ ಒತ್ತಾಯಿಸಿದರು.