

ಹುಬ್ಬಳ್ಳಿ: ಕರ್ನಾಟಕದಲ್ಲಿ ನೂರಾರು ವರ್ಷದಿಂದ ಉಳುಮೆ ಮಾಡುತ್ತಿದ್ದ ಜಮೀನುಗಳಲ್ಲಿ ವಕ್ಫ ಹೆಸರು ನಮೂದಿಸಿರುವುದು, ರೈತರಷ್ಟೇ ಅಲ್ಲ ಮಠ, ಮಂದಿರಗಳ ಆಸ್ತಿಯೂ ವಕ್ಫ ತಮ್ಮದೆಂದು ಹೇಳಿರುವುದು ಅತ್ಯಂತ ಗಂಭೀರ ವಿಷಯ, ಇದು ಸರ್ಕಾರದ ಹಸ್ತಕ್ಷೇಪ ಇಲ್ಲದೇ ಇದು ಹೇಗೆ ಸಾಧ್ಯ? ಎಂದು ಕೇಂದ್ರ ಸರ್ಕಾರದ ವಕ್ಫ ಕಾಯ್ದೆ ತಿದ್ದುಪಡಿ ಸಂಬಂಧಿತ ಜಂಟಿ ಸದನ ಸಮಿತಿ ಚೇರ್ಮನ್ ಜಗದಂಬಿಕಾ ಪಾಲ್ ಪ್ರಶ್ನಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಗದಗ, ಹಾವೇರಿ, ಧಾರವಾಡ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ಶಾಸಕರು, ಜನಪ್ರತಿನಿಧಿಗಳ ನಿಯೋಗದಿಂದ ಮನವಿ ಸ್ವೀಕರಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ಸರ್ಕಾರ ಈಗ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವ ಬಗ್ಗೆ ಮಾತನಾಡುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವಾಗಲಿದೆ. ಉತಾರದಲ್ಲಿ ನಮೂದಾಗಿರುವ ವಕ್ಪ ಹೆಸರು ರದ್ದಾಗಬೇಕು. ಹೀಗೆಂದು ಅನೇಕ ರೈತರು ಮನವಿ ಮಾಡಿದ್ದಾರೆ. ರೈತರು, ವಿವಿಧ ಸಂಘ ಸಂಸ್ಥೆಯವರು ನೀಡಿರುವ ಮನವಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುವುದು. ಕರ್ನಾಟಕದಲ್ಲಿ ಈ ಕುರಿತು ಬಿಜೆಪಿಯಿಂದ ರಚನೆಯಾಗಿರುವ ಸತ್ಯ ಶೋಧನ ಸಮಿತಿಯವರನ್ನು ದೆಹಲಿ ಕರೆಸಿಕೊಂಡು ಸಮಾಲೋಚನೆ ಮಾಡಲಾಗುವುದು. ಆ ನಂತರವೇ ಸಮಗ್ರ ವರದಿ ಸಿದ್ಧಪಡಿಸಿ ಸ್ಪೀಕರ್ ಗೆ ಸಲ್ಲಿಸಲಾಗುವುದು ಎಂದರು.
31 ಸದಸ್ಯರುಳ್ಳ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಆಪ್, ಸಮಾಜವಾದಿ ಸೇರಿ ಎಲ್ಲ ಪಕ್ಷಗಳ ಲೋಕಸಭೆ ಸದಸ್ಯರು ಇದ್ದಾರೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಪಾಲ್ ಸ್ಪಷ್ಟಪಡಿಸಿದರು.
ಸಮಿತಿ ಸದಸ್ಯ, ಸಂಸದ ತೇಜಶ್ವಿ ಸೂರ್ಯ ಮಾತನಾಡಿ, ವಕ್ಫ ಕಾಯ್ದೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮೂರು ತಿಂಗಳ ಹಿಂದೆ ಹೊಸ ಕಾಯಿದೆಯನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಇದರ ಕರಡು ತಯಾರಿಸುವ ಮೊದಲು ಜಂಟಿ ಸದನ ಸಮಿತಿಯು ದೇಶದ ಎಲ್ಲೆಡೆ ಅಭಿಪ್ರಾಯ ಸಂಗ್ರಹಿಸುತ್ತಿದೆ. ಕರ್ನಾಟಕದಲ್ಲೂ ರೈತರು, ಸಾರ್ವಜನಿಕರ ಮನವಿ ಆಲಿಸಲಾಗುತ್ತಿದೆ. ಎಲ್ಲರ ಅಭಿಪ್ರಾಯ ಪಡೆದು ಆಮೂಲಾಗ್ರ ಬದಲಾವಣೆಗೆ ಕೇಂದ್ರ ಅಣಿಯಾಗಲಿದೆ. ಹುಬ್ಬಳ್ಳಿಯಲ್ಲಿ ಒಟ್ಟು 75 ಅಜಿರ್ಗಳು ಬಂದಿವೆ ಎಂದರು.