ರೈತರ ಜಮೀನು ಕಬಳಿಸಲು ವಕ್ಫ್ ಬೋರ್ಡ್ ಸಂಚು, ಪ್ರತಿಭಟನೆ

rastra bhaktara balaga protest
ವಕ್ಫ್ ಬೋರ್ಡ್ ಕಬಳಿಸಿರುವ ರೈತರ ಜಮೀನುಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಶಿವಮೊಗ್ಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಇ.ಕಾಂತೇಶ್, ಇ.ವಿಶ್ವಾಸ್, ಶಶಿಕಲಾ, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಎಸ್.ಜಿ.ಬಾಲು ಇತರರಿದ್ದರು.
Published on

ಶಿವಮೊಗ್ಗ: ರಾಜ್ಯದ ಹಲವೆಡೆ ಬಡ ರೈತರ ಜಮೀನು ಮತ್ತು ಹಿಂದು ಮಠ-ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಕಬಳಿಸುತ್ತಿದೆ. ತಕ್ಷಣವೇ ಕಬಳಿಕೆ ಮಾಡಿಕೊಂಡಿರುವ ಎಲ್ಲ ಭೂಮಿಯನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ವಿಜಯಪುರ, ದಾವಣಗೆರೆ, ಬಾಗಲಕೋಟೆ, ಬೀದರ್ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ನೂರಾರು ವರ್ಷಗಳಿಂದ ನಿಯಮಾನುಸಾರ ಅಧಿಕೃತ ಪಹಣಿ ಪತ್ರ, ಖಾತೆಯನ್ನೂ ಹೊಂದಿ, ಸಕಾಲಕ್ಕೆ ಕಂದಾಯ ಪಾವತಿಸಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನನ್ನು ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದು ಮಠಗಳ ಆಸ್ತಿಯನ್ನೂ ಇದ್ದಕ್ಕಿದ್ದಂತೆ ವಕ್ಫ್ ಬೋರ್ಡ್ ತನ್ನದೆಂದು ನೋಟಿಸ್ ನೀಡುತ್ತಿರುವುದಕ್ಕೆ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರತಿ ಜಿಲ್ಲೆಗೂ ಭೇಟಿ ನೀಡಿ ವಕ್ಫ್ ಅದಾಲತ್ ಹೆಸರಿನಲ್ಲಿ ಅಧಿಕಾರಿಗಳನ್ನು ಬೆದರಿಸಿ ಬಡ ರೈತರ ಸಾವಿರಾರು ಎಕರೆ ಜಮೀನಿನ ದಾಖಲೆಗಳನ್ನು ತಿದ್ದಿ ಅವುಗಳನ್ನು ಕಾನೂನು ಬಾಹಿರವಾಗಿ ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಿಸುತ್ತಿದ್ದಾರೆ. ಕೂಡಲೇ ಸಚಿವ ಜಮೀರ್ ನಡೆಸುತ್ತಿರುವ ಅದಾಲತ್ ಅನ್ನು ಸರ್ಕಾರ ನಿರ್ಬಂಧಿಸಬೇಕು. ಬಡ ರೈತರು ಹಾಗೂ ಮಠಗಳಿಗೆ ನೀಡಿರುವ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದಿಂದ ಸಕಾರಾತ್ಮಕ ನಿರ್ಧಾರ ಬಾರದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದು ಸಚಿವ ಜಮೀರ್ ಅಹ್ಮದ್ ಅವರ ಕಾನೂನು ಬಾಹಿರ ನಡವಳಿಕೆ ಎಂದು ಆರೋಪಿಸಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ಶಶಿಕಲಾ, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಎಸ್.ಜಿ.ಬಾಲು, ಚಿದಾನಂದ, ಮೋಹನ್ ಜಾಧವ್, ಸತ್ಯಣ್ಣ, ಶಿವಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net