

ಹುನಗುಂದ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿರುವುದನ್ನು ಖಂಡಿಸಿ ಹುನಗುಂದ ಮತಕ್ಷೇತ್ರದ ಬಿಜೆಪಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮುಖಂಡ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, ದೇಶದಲ್ಲಿ ವಕ್ಫ್ ಮಂಡಳಿ ಮೊದಲು 8 ಸಾವಿರ ಎಕರೆ ಇದ್ದ ಆಸ್ತಿ ಇದೀಗ 9 ಲಕ್ಷ ಎಕರೆವರೆಗೆ ಆಗಿದೆ. ರಾಜ್ಯವನ್ನು ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿರುವುದು ಖಂಡನೀಯ. ರೈತರ ಸಾರ್ವಜನಿಕರ ಆಸ್ತಿ ಕಬಳಿಸುವ ಹುನ್ನಾರಕ್ಕೆ ಕೈಹಾಕಿದ್ದು ಯಾವುದೇ ಕಾರಣಕ್ಕೆ ನಮ್ಮ ಪಕ್ಷದಿಂದ ನಿರಂತರ ಹೋರಾಟ ನಡೆಸಿ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ತಿಳಿಸಿದರು.
ಮುಖಂಡ ಪ್ರದೀಪ ಅಮರಣ್ಣನವರ ಮಾತನಾಡಿ, ತಾಲೂಕಿನ ಓತಗೇರಿ ಗ್ರಾಮದಲ್ಲಿ 17 ಎಕರೆ 11 ಗುಂಟೆ ಆಸ್ತಿ ಶಾಲೆ, ಗ್ರಾಮ ಪಂಚಾಯಿತಿ, ಹೈಸ್ಕೂಲ್ ದೇವಸ್ಥಾನ ಸೇರಿ ಇಡೀ ಹಳ್ಳಿಯೇ ವಕ್ಫ್ ಮಂಡಳಿಗೆ ದಾಖಲಾಗಿದೆ. ಕೆಸರಭಾವಿಯಲ್ಲಿ 1 ಎಕರೆ ದಲಿತ ಸಮಾಜದ ಸ್ಮಶಾನ, ಹೇಮವಾಡಗಿಯಲ್ಲಿ 1 ಎಕರೆ, ಹುನಗುಂದಲ್ಲಿ ಮಲ್ಲಿಕಾರ್ಜುನ ಗುಡ್ಡದ ಅವರ 22 ಎಕರೆ, ನಿಂಗದ ಕಟ್ಟೆ, ಶಿವಕುಮಾರ ನಾಗರಾಳ ಅವರ 2 ಎಕರೆ, ಗೋರಜನಾಳದಲ್ಲಿ 10 ಎಕರೆ 11 ಗುಂಟೆ ರೈತರ ಜಮೀನು, ಗುಡೂರನ, ಎಸ್.ಎಸ್.ಕೆ. ಸಮಾಜದ ಭವನ, ಶ್ರೀಶೈಲ ಇಮ್ರಾಪೂರ ರೈತರ ಜಮೀನು, ಭೀಮನಗಡ, ಚಿಕನಾಳದಲ್ಲಿ ಎಲ್ಲರಿಗೂ ಅಧಿಕಾರಿಗಳ ಮೇಲೆ ಒತ್ತಡ ನೀಡಿ ನೋಟಿಸ್ ನೀಡಿದ್ದಾರೆ. ಜಿಲ್ಲೆಯ 6,900 ಆಸ್ತಿಗಳ ಮೇಲೆ ವಕ್ಫ್ ಮಂಡಳಿ ನೋಟಿಸ್ ನೀಡಲಾಗಿದೆ. ಆದ್ದರಿಂದ ನಮ್ಮ ತಾಲೂಕಿನಲ್ಲಿ ಅಂತಹ ಆಸ್ತಿಗಳ ಮೇಲೆ ತಹಸೀಲ್ದಾರ್ ತನಿಖೆ ಮಾಡಿಸಬೇಕು. ರೈತರು ಮನೆಯಲ್ಲಿ ಕುಳಿತುಕೊಳ್ಳದೇ ನಿಮ್ಮ ಆಸ್ತಿಯ ಉತಾರ ಬಗ್ಗೆ ನಿಗಾವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ವಕ್ಫ್ ಕಬಳಿಸಿ ಪೊಲೀಸರಿಂದ ಮತ್ತು ಜೆಸಿಬಿ ಮೂಲಕ ಮನೆ ಮತ್ತು ಜಮೀನು ಮುಟ್ಟುಗೋಲು ಹಾಕುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ, ವಕೀಲ ವೀರಣ್ಣ ಬಂಡಿ ಮಾತನಾಡಿ, ಪಟ್ಟಣದ ರಿ.ಸ.ನಂ. 780/14 ಕ್ಷೇತ್ರ 22 ಎಕರೆ 1 ಗುಂಟೆ ಹಾಗೂ 457/ಆ/2 ಮೇಗಲಪೇಟಿಯ ಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನ, ಕೊಂಡದ ಕೆರೆ, ನಿಂಗದ ಕಟ್ಟಿ, ಪೀರಾರಗಲ್ಲಿ ಸೇರಿ ಇರುವ ಆಸ್ತಿಗಳು 2017-18ರಲ್ಲಿನ ಅಕ್ರಮವಾಗಿ ಅಲ್ಲಿಯ ನಿವಾಸಿಗಳಿಗೆ ಯಾವುದೇ ನೋಟಿಸ್ ನೀಡದೆ ವಕ್ಫ್ ಹೆಸರಿನಲ್ಲಿ ವರ್ಗಾವಣೆ ಮಾಡಿರುವುದನ್ನು ಕೂಡಲೇ ಸರ್ಕಾರ ರದ್ದು ಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ನಿರಂತರ ಉಗ್ರ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಮುಖಂಡ ರಾಜುಗೌಡ ದೊಡ್ಡನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಹಾಂತಗೌಡ ಪಾಟೀಲ, ರಾಜಕುಮಾರ ಬಾದವಾಡಗಿ ಮಾತನಾಡಿದರು.
ಮಹಾಂತೇಶ ತೆಗ್ಗಿನಮಠ, ಸಾಂತಪ್ಪ ಹೊಸಮನಿ, ಮಲ್ಲು ಚೂರಿ, ಮಹಾಂತೇಶ ಚಿತ್ತವಾಡಗಿ, ಮಹೇಶ ಬೆಳ್ಳಿಹಾಳ, ಪ್ರವೀಣ ಹಳಪೇಟಿ, ಹನುಮಂತ ಮಾಗಿ, ಸಂಗಣ್ಣ ಕಡಪಟ್ಟಿ, ಶರಣಬಸು ನಾರಗಲ್, ಶೋಭಾ ಆಮದಿಹಾಳ ಇತರರಿದ್ದರು.