ವಕ್ಫ್ ಕಾಯ್ದೆ ಹಿಂಪಡೆಯಲಿ

11BLH1
ಬೈಲಹೊಂಗಲದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ಮನವಿ ಸಲ್ಲಿಸಿದರು. ವಿಜಯ ಮೆಟಗುಡ್ಡ, ಪ್ರಮೋದಕುಮಾರ ವಕ್ಕುಂದಮಠ, ಎಂ.ಆರ್. ಮೆಳವಂಕಿ ಇತರರು ಇದ್ದರು.
Published on

ಬೈಲಹೊಂಗಲ: ವಕ್ಫ್ ಕಾಯ್ದೆ ದುರ್ಬಳಕೆಯಾಗುತ್ತಿದ್ದು, ಬೋರ್ಡ್‌ಗೆ ಸಂಬಂಧಿಸದ ಆಸ್ತಿಗಳ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಹೆಸರು ತೆಗೆಯಬೇಕು. ಜತೆಗೆ ವಕ್ಫ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ, ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾಜಿ ಸೈನಿಕರ ಸಂಘ, ರೈತ ಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ವಿಶ್ವಕರ್ಮ ಸಮಾಜ, ರಾಜಸ್ಥಾನ ಸಂಘ, ಹಡಪದ ಸಮುದಾಯದವರು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನೇತತ್ವದಲ್ಲಿ ಪಟ್ಟಣದ ಎಸ್.ಆರ್.ವೃತ್ತದಲ್ಲಿ ರಸ್ತೆ ರೋಖೋ ನಡೆಸಿ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಜಮೀನು ಸೇರಿ ಇತರೆ ಆಸ್ತಿಗಳಲ್ಲಿ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದ್ದು, ಇದರಿಂದ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದೆ. ರಾಜ್ಯ ಸರ್ಕಾರ ಪಹಣಿ ಪತ್ರಿಕೆಯಲ್ಲಿರುವ ವಕ್ಫ್ ಹೆಸರನ್ನು ತೆಗೆಯಬೇಕು. ಕೂಡಲೇ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದು ಎಂದರು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಕ್ಫ್ ಕಾನೂನು ರದ್ದು ಪಡಿಸದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಚಿತ್ರ ನಟ ಶಿವರಂಜನ ಬೋಳಣ್ಣವರ, ಉದ್ಯಮಿ ವಿಜಯ ಮೆಟಗುಡ್ಡ, ಪ್ರಮೋದಕುಮಾರ ವಕ್ಕುಂದಮಠ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ನಿಂಗಪ್ಪ ಚೌಡಣ್ಣವರ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಕಾಶಿನಾಥ ಬಿರಾದಾರ, ರೈತ ಸಂಘದ ಮುಖಂಡ ಮಹಾಂತೇಶ ಕಮತ, ಬಿ.ಎಂ. ಚಿಕ್ಕನಗೌಡರ ಮಾತನಾಡಿದರು.

ಮಹಾಂತೇಶ ತುರಮರಿ, ಬಿಜೆಪಿ ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಸಿ.ಆರ್. ಪಾಟೀಲ, ಕಾರ್ತಿಕ ಮಲ್ಲೂರ, ಬಾಳನಗೌಡ ಪಾಟೀಲ, ಸುನೀಲ ವಣೇಕರ, ಸೋಮನಾಥ ಸೊಪ್ಪಿಮಠ, ಎ್.ಎಸ್.ಸಿದ್ದನಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net