

ಕೆರೂರ: ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿ ರದ್ದುಗೊಳಿಸುವಂತೆ ಪಟ್ಟಣದ ನೌಜವಾನ್ ಶೀರತ್ ಕಮಿಟಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತರಕಾರಿ ಮಾರುಕಟ್ಟೆಯಲ್ಲಿನ ಮನ್ಸೂರ್ ಅಲಿ ಮಸೀದಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನಾಡಕಚೇರಿ ಕಾರ್ಯಾಲಯದವರೆಗೆ ತೆರಳಿ, ಉಪತಹಸೀಲ್ದಾರ್ ವೀರೇಶ ಬಡಿಗೇರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮುಖಂಡ ರಜಾಕ್ ಟಪಾಲ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ-2025 ಸಂವಿಧಾನ ವಿರೋಧವಾಗಿದ್ದು, ಕೇಂದ್ರ ಸರ್ಕಾರದ ಹಿತರಕ್ಷಕರ ಕಾನೂನು ಇದಾಗಿದೆ. ಈ ಕಾಯ್ದೆಯಿಂದ ಮುಸ್ಲಿಂ ಭಾಂದವರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲಿದೆ ಎಂದರು.
ವಕ್ಫ್ ಆಸ್ತಿ ಲೂಟಿ ಮಾಡಿದವರನ್ನು ರಕ್ಷಣೆ ಮಾಡಲು ಈ ಕಾನೂನು ಜಾರಿಗೊಳಿಸಲಾಗಿದ್ದು, ಈ ಮೂಸದೆಯಿಂದ ಮುಸ್ಲಿಂ ಭಾಂದವರಿಗೆ ಅನ್ಯಾಯವಾಗಲಿದೆ. ತಕ್ಷಣ ವಕ್ಫ್ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಅಗ್ರಹಿಸಿದರು.
ನೌಜವಾನ್ ಶೀರತ್ ಕಮಿಟಿ ಕಾರ್ಯದರ್ಶಿ ಉಮರಾರೂಕ್ ಪೆಂಡಾರಿ ಮಾತನಾಡಿದರು. ಪ್ರತಿಭಟನೆಗೂ ಮುನ್ನ ಪಹಲ್ಗಾಮನಲ್ಲಿ ನಡೆದ ಉಗ್ರ ದಾಳಿಖಂಡಿಸಿ 5 ನಿಮಿಷ ಮೌನಾಚರಣೆ ಮಾಡಲಾಯಿತು.
ನೌಜವಾನ್ ಶೀರತ್ ಕಮೀಟಿ ಅಧ್ಯಕ್ಷ ಮೋದಿನಸಾಬ ದೊಡಕಟ್ಟಿ, ಉಪಾಧ್ಯಕ್ಷ ಇಸ್ಮಾಯಿಲ್ ಮುಲ್ಲಾ, ಸಮಾಜದ ಮುಖಂಡರಾದ ಉಸ್ಮಾನಸಾಬ ಮುಲ್ಲಾ, ಸಾಹೇಬಲಾಲ್ ಜಾತಗೇರ, ಮೈಬೂಬಸಾಬ ವರ್ಚಗಲ್, ದಾದಾಪೀರ ಅತ್ತಾರ, ಕರಿಮಸಾಬ ದೊಡಮನಿ, ಇಮ್ರಾನ್ ಅಗಸಿಮನಿ ಮತ್ತಿತರರಿದ್ದಾರೆ.