

ಹೊಳೆಹೊನ್ನೂರು: ಆಕಾಶ ಅದಿರಿತು ಎಚ್ಚರ… ಇದೊಂದು ಸಾಮಾನ್ಯ ಉಕ್ತಿಯಲ್ಲ. ಭದ್ರಾವತಿ ತಾಲೂಕು ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ ವಾಕ್ಯ.
ದೇವರ ಕಾರ್ಣಿಕದ ವಾಣಿಯನ್ನು ಆಧರಿಸಿ ರೈತಾಪಿ ವರ್ಗ ಇಡೀ ವರ್ಷದ ಮಳೆ, ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ಪ್ರಕೃತಿ ವೈಪರಿತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗು ಹೋಗುಗಳನ್ನು ಲೆಕ್ಕಾಚಾರ ಹಾಕುತ್ತಾರೆ.
ಪಟ್ಟಣ ಸಮೀಪದ ಮೈದೊಳಲಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕ ನಡೆಯುತ್ತದೆ. ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈ ಮೇಲೆ ಆಹ್ವಾನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿಯುತ್ತಾರೆ. ಈ ಬಾರಿ ಆಕಾಶ ಅದಿರಿತು ಎಚ್ಚರ ಎಂಬ ಉಕ್ತಿಯನ್ನು ಹೇಳಿದರು.
ರಾಜ್ಯದಲ್ಲಿ ವರುಣನ ಅವಕೃಪೆಯಿಂದ ಮಳೆ ಕಡಿಮೆಯಾಗಿ ಕೃಷಿಗೆ ಹಿನ್ನಡೆಯಾಗುತ್ತಿದೆ. ಕಡಿಮೆ ಆಗುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಅಚಚಣೆ ಆಗುತ್ತಿದೆ. ಅಲ್ಲದೆ ಕೊನೆಯಲ್ಲಿ ಎಚ್ಚರ ಎಂದಿರುವುದು ಮುಂದಾಗಬಹುದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣಿಕದ ವಾಕ್ಯವನ್ನು ವಿಶ್ಲೇಷಿಸಿದರು. ನಾಗರಪಂಚಮಿಯಂದು ನಡೆಯುವ ಕಾರ್ಣಿಕ ವಾಕ್ಯವನ್ನು ಆಧರಿಸಿ ಪ್ರಕೃತಿಯಲ್ಲಿ ಉಂಟಾಗುವ ವೈಪರಿತ್ಯಗಳನ್ನು ಹಿರಿಯರು ಅರ್ಥೈಸುವುದು ವಾಡಿಕೆ.
ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ, ಶ್ರೀರಾಮದೇವರ ಉತ್ಸವ ಮೂರ್ತಿಗಳು ಕಾರ್ಣಿಕೋತ್ಸವದಲ್ಲಿ ಭಾಗಿಯಾಗಿದ್ದವು.