

ಮೂಡಿಗೆರೆ: ಅಗ್ನಿ ಅವಘಡಗಳು ಸಂಭವಿಸುವ ಮುನ್ನ ಜನತೆ ಎಚ್ಚೆತ್ತುಕೊಂಡಲ್ಲಿ ಯಾವುದೇ ಅಪಾಯ ಎದುರಾಗುವುದಿಲ್ಲ. ಅಪಾಯದ ಸೂಚನೆ ತಿಳಿದ ಕೂಡಲೇ ತುರ್ತು ಸಂಖ್ಯೆಗೆ ಕರೆ ಮಾಡಿದರೆ ಹೆಚ್ಚಿನ ಅನಾಹುತ ತಡೆಗಟ್ಟಬಹುದು ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ದೇವೆಂದ್ರಪ್ಪ ಹೇಳಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿಶಾಮಕ ದಳದಿಂದ ಅಗ್ನಿ ಅವಘಡ ತಡೆಗಟ್ಟುವಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದ ಅವರು, ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಅವಘಡಗಳು ಸಂಭವಿಸುತ್ತವೆ. ಸಾರ್ವಜನಿಕ ಸ್ಥಳ ಮತ್ತು ಕಟ್ಟಡಗಳಲ್ಲಿ ವಿದ್ಯುತ್‌ಶಾರ್ಟ್ ಸರ್ಕ್ಯೂಟ್ ಹಾಗೂ ಅನಿಲ ಸೋರಿಕೆಯಿಂದ ಅಗ್ನಿ ಅಪಘಡ ಸಂಭವಿಸುತ್ತವೆ. ಇಂತಹ ಅವಘಡಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.
ಅಗ್ನಿ ಅವಘಡ ಸಂಭವಿಸಿದಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಹೆಚ್ಚಿನ ಅನಾಹುತ ತಪ್ಪಿಸಬಹುದು. ಸಾರ್ವಜನಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಅಗ್ನಿ ಅವಘಡದ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬ ಅರಿವು ಇರಬೇಕು. ಹಾಗಾದರೆ ಮಾತ್ರ ಅಪಾಯಕ್ಕೆ ಸಿಲುಕಿದ ಜನರು, ಕಟ್ಟಡ ಮತ್ತು ಸಂಪತ್ತುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪ್ರಿಯಾಂಕ ಪ್ರಭಾಕರ್ ಮಾತನಾಡಿ, ಅಗ್ನಿ ಅವಘಡ ಸಂಭವಿಸುವುದು ಅನಿರೀಕ್ಷಿತವಾಗಿರುತ್ತದೆ. ಇದನ್ನು ತಡೆಯುವ ಹಾಗೂ ಎದುರಿಸುವ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಹೊಂದಿರಬೇಕು. ಇದರಿಂದ ಪ್ರಾಣ ಹಾನಿ ತಡೆಗಟ್ಟಬಹುದು. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡರೆ ದೂರಕ್ಕೆ ಓಡಿ ಹೋಗುವವರೆ ಹೆಚ್ಚು, ಬಲಶಾಲಿಗಳು ಧೈರ್ಯ ಕಳೆದುಕೊಳ್ಳದೆ ಅವಘಡದ ವೇಳೆ ಅಪಾಯದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾತ್ಯಕ್ಷಿಕೆ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ಷಣೆ ಮಾಡಿಕೊಳ್ಳುವ ವಿಧಾನ, ಬೆಂಕಿ ನಿಯಂತ್ರಿಸುವ ವಿಧಾನಗಳ ಬಗ್ಗೆ ಅಣುಕು ಪ್ರದರ್ಶನ ನೀಡಿದರು. ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಡಾ.ಕುಮಾರಸ್ವಾಮಿ ಮತ್ತು ಸಿಬ್ಬಂದಿಗಳಿದ್ದರು.