ಕಾಂಗ್ರೆಸ್ ಸ್ಥಿತಿ ಏನಾಗಲಿದೆ ಎಂದು ಕಾದು ನೋಡಿ

08arsph3ep
ಅರಸೀಕೆರೆ ಪ್ರವಾಸಿ ಮಂದಿರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿದರು. ಎನ್ ಆರ್.ಸಂತೋಷ್, ಬಂಡಿಗೌಡರ ರಾಜಣ್ಣ, ಚಂದ್ರಶೇಖರ್, ಅಶೋಕ್, ಗಂಗಾಧರ್ ಇತರರಿದ್ದರು.
Published on

ಅರಸೀಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ಇನ್ನೆರಡು ತಿಂಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾರ್ಮಿಕ ನುಡಿದರು.


ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರ ಜತೆ ಸಭೆ ನಡೆಸಿ ಮಾತನಾಡಿದ ಅವರು, ಮೈಸೂರು ಮುಡಾ ಹಗರಣ ಯಾವ ದಿಕ್ಕಿಗೆ ತಲುಪಿದೆ ಎಂಬುದು ನೀವೇ ನೋಡುತ್ತಿದ್ದೀರಿ. ಸಿಎಂ ಗಾದಿಗೇರಲು ಸಚಿವರೇ ಪೈಪೋಟಿಗೆ ಬಿದ್ದಿರುವುದು ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಎಲ್ಲವೂ ರಾಜ್ಯದ ಜನತೆಗೆ ಗೊತ್ತಾಗಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇಬಿಟ್ಟಿತು ಎಂದು ಬೆಳಗ್ಗೆ ಬೀಗಿದ್ದವರಿಗೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ತಕ್ಕ ಉತ್ತರ ನೀಡಿದ್ದು, ರಾಜ್ಯದಲ್ಲಿಯೂ ಏನೇನೋ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು.
ಕಳೆದ ಹದಿನೈದು ವರ್ಷಗಳಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ಪಡೆದು ಪಕ್ಷದ್ರೋಹ ಮಾಡಿದವರಿಗೆ ಉತ್ತರ ನೀಡಲು ಹೋಗುವುದಿಲ್ಲ. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ ಸಂಸದರ ನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಅನುದಾನದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ, ಎಚ್‌ಡಿಕೆ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಜೈಕಾರ ಹಾಕಿದ ವ್ಯಕ್ತಿ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಉಘೇ ಎನ್ನುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷ ಮಾತಿನ ಚಾಟಿ ಬೀಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಕಾರ್ಯಕರ್ತರು ಶೀಘ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದ್ದು ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು. ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿದ ಎಚ್.ಡಿ.ರೇವಣ್ಣ, ಪಕ್ಷದ ಹಿತ ಮುಖ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು. ಕಾರ್ಯಕರ್ತರು ಹಾಗೂ ಮುಖಂಡರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಆರೋಪ, ಪ್ರತ್ಯಾರೋಪ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಸಂಘಟನೆಯಲ್ಲಿ ತೊಡಗಿಕೊಂಡಲ್ಲಿ ಮಾತ್ರವೇ ಗೆಲುವು ಸಾಧ್ಯವಾಗಲಿದೆ. ನಿಮ್ಮೊಂದಿಗೆ ನಾವಿದ್ದೇವೆ ಹೆದರಬೇಡಿ, ಡಿಸಿ-ಗೀಸಿ ಏನು ಮಾಡಲಾಗದು ನಡೆಯಿರಿ ಎಂದು ಉತ್ಸಾಹ ತುಂಬಿದರು.


ಮುಖಂಡ ಎನ್ ಆರ್.ಸಂತೋಷ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯ ಸಿ.ಗಿರೀಶ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ತಾಪಂ ಮಾಜಿ ಸದಸ್ಯ ಹೊಸೂರು ಗಂಗಾಧರ್, ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ಮುಖಂಡರಾದ ಗಂಡಸಿ ಮಂಜಣ್ಣ, ಬಿ.ಜಿ.ನಿರಂಜನ್, ಹರ್ಷವರ್ಧನ್‌ರಾಜ್, ಗ್ರಾಪಂ ಸದಸ್ಯ ಉಮೇಶ್, ಗಣೇಶ್, ರವಿ, ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net