

ಸ್ವಪಕ್ಷದ ಸಚಿವರ ವಿರುದ್ಧ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವಿಚಾರವಾಗಿ ಮಾತನಾಡಿ ಮಾಜಿ ಸಿಎಂ ಕುಮಾರಸ್ವಾಮಿ, ಇದು ಕೇವಲ ಬಿ.ಆರ್. ಪಾಟೀಲ್ ಅವರ ಸಮಸ್ಯೆಯಲ್ಲ, ಇಡೀ ವ್ಯವಸ್ಥೆಯ ಸಮಸ್ಯೆ ಆಗಿದೆ ಎಂದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ಸರ್ಕಾರಕ್ಕೆ ಕಂಟಕವಾಗುತ್ತಾ ಎಂದು ಕಾದು ನೋಡಿ. ಇದರಿಂದ ಸರ್ಕಾರಕ್ಕೆ ಏನಾಗುತ್ತದೆ ಅಂತ ಹೇಳಲು ನಾನು ಜ್ಯೋತಿಷಿ ಅಲ್ಲ. ಹಿರಿಯ ಶಾಸಕರು ಅವರ ಪಕ್ಷದ ಮಂತ್ರಿಗಳ ಮನನೊಂದು ಪತ್ರ ಬರೆದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಸರ್ಕಾರ ಸೆಲ್ಫ್ ಸೂಸೈಡ್ ಆಗುತ್ತಾ?, ಅಪಘಾತ ಅಥವಾ ಹಿಟ್ ವಿಕೆಟ್ ಆಗಬಹುದು ಕಾದು ನೋಡಿ ಎಂದ ಅವರು, ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನರ ಪರಿಸ್ಥಿತಿ ಏನಾಗಬಹುದು? ಎಂದು ಜನರಿಗೂ ಆತಂಕ ಮೂಡಿದೆ. ಆದರೆ ಶಾಸಕ ಬಿ.ಆರ್.ಪಾಟೀಲ್ ತನಿಖೆ ಮಾಡಲು ಒತ್ತಾಯ ಮಾಡಿದ್ದು, ಸದನಕ್ಕೆ ಬರುವುದಿಲ್ಲ ಎಂದಿದ್ದಾರೆ. ಇದರಿಂದ ಈ ಸರ್ಕಾರದಲ್ಲಿ ಶಾಸಕರಿಗೆ ಎಷ್ಟು ಬೆಲೆ ಇದೆ ಅನ್ನೋದು ಗೊತ್ತಾಗುತ್ತದೆ ಎಂದರು.