

ಬ್ಯಾಡಗಿ: ಕೂಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆತ ಪ್ರೀತಿಸುತ್ತಿದ್ದ ಯುವತಿ ವಿರುದ್ಧ ಜಾತಿನಿಂದನೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಅಂಕಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮೃತನ ಕುಟುಂಬದ ಹುಲಿಗೆಮ್ಮ ಮುರುಗೇಶಪ್ಪ ಬೈರಾಪುರ (50) ಎಂಬುವರು ದೂರು ನೀಡಿದ್ದಾರೆ.
ಶಶಿಧರ ಬೈರಾಪುರ (23) ಜ. 27ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಮೊಬೈಲ್ ನೋಡಿದಾಗ ಅಂಕಿತಾ ಎಂಬ ಯುವತಿ ಪ್ರೀತಿಸುತ್ತಿದ್ದ ಕುರಿತು ತಿಳಿದು ಬಂದಿದೆ. ಅಲ್ಲದೆ ಯುವತಿಯು ಆತನನ್ನು ಪ್ರೀತಿಸುವ ಸಮಯದಲ್ಲಿ ಹಣ, ಚಿನ್ನಾಭರಣದ ಒಡವೆ ತೆಗೆದುಕೊಂಡಿದ್ದಾಳೆ.
ನಂತರ ಮದುವೆ ವಿಚಾರ ಬಂದಾಗ ನೀನು ಬೇರೆ ಜಾತಿಯವನು ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲ. ನೀನು ಬೇಕಾದರೆ ಸತ್ತು ಹೋಗು ಎಂದು ಪ್ರಚೋದನೆ ನೀಡಿದ್ದಾಳೆ. ಈ ಕುರಿತು ಇಬ್ಬರ ಸಂಭಾಷಣೆಗಳು ಮೊಬೈಲ್ನಲ್ಲಿವೆ. ಇದರಿಂದ ಶಶಿಧರ ಮನಸ್ಸಿಗೆ ಬೇಸರ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹುಲಿಗೆಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.