

ಕಾರವಾರ: ಮಾಜಾಳಿಯ ರಾಮನಾಥ ದೇವರ ಜಾತ್ರೆಯ ಅಂಗವಾಗಿ ಸೋಮವಾರ ಬೃಹತ್ ವಾಫರ್ (ಆಕಾಶ ಬುಟ್ಟಿ)Launch ಮಾಡಲಾಯಿತು. ಸುಮಾರು 10 ಅಡಿ ಎತ್ತರದ 6 ಅಡಿ ವ್ಯಾಸದ ಬೃಹತ್ ಸಿಲಿಂಡರ್ ಆಕಾರದ ಬುಟ್ಟಿಯು ಹೊಗೆಯುಗುಳುತ್ತ ಆಕಾಶದತ್ತ ಕ್ಷಿಪಣಿಯಂತೆ ಚಿಮ್ಮಿತು. ನೂರಾರು ಭಕ್ತರು ಹರ ಹರ ಮಹಾದೇವ ಜಯಘೋಷದಡನೆ ನಮಸ್ಕರಿಸಿದರು. ಕರ್ನಾಟಕದ ಕಟ್ಟ ಕಡೆಯ ಗ್ರಾಮ ಮಾಜಾಳಿಯ ಗ್ರಾಮ ದೇವರು ರಾಮನಾಥೇಶ್ವರ ದೇವಸ್ಥಾನದ ಕಾರ್ತಿಕ ಜಾತ್ರೆಯ ಅಂಗವಾಗಿ ಆಕಾಶ ಬುಟ್ಟಿ ಹಾರಿ ಬಿಡುವ ಹಾಗೂ ಆಕಾಶ ಬುಟ್ಟಿಗಳಿಂದ ಕಮಾನುಗಳನ್ನು ಅಲಂಕರಿಸುವ ವಿಶಿಷ್ಟ ಸಂಪ್ರದಾಯ ರೂಢಿಯಲ್ಲಿದೆ. ಜಾತ್ರೆಯ ಎರಡನೇ ದಿನ ಸಮೀಪದ ವಾಂಗಡದಲ್ಲಿ ಬೆಳಗ್ಗೆ ಒಂದು ವಾಫರ್ ಹಾರಿಸಿದರೆ, ಸಾಯಂಕಾಲ ರಾಮನಾಥ ದೇವಸ್ಥಾನ ಪಕ್ಕದಲ್ಲಿ ಇನ್ನೊಂದು ವಾಫರ್ ಹಾರಿಸಲಾಗುತ್ತದೆ. ಇದರಿಂದ ಗ್ರಾಮದಲ್ಲಿ ರೋಗ ಋಜಿನಗಳು ಬರುವುದಿಲ್ಲ ಎಂಬುದು ರಾಮನಾಥ ದೇವಸ್ಥಾನಕ್ಕೆ ನಡೆದುಕೊಳ್ಳುವ ಕುಳಾವಿಗಳ ನಂಬಿಕೆ. `ನೂರಾರು ವರ್ಷಗಳಿಂದ ಇದೇ ರೂಢಿ ನಡೆದುಕೊಂಡು ಬಂದಿದೆ. ಇದನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ' ಎನ್ನುತ್ತಾರೆ ರಾಮನಾಥ ದೇವಸ್ಥಾನ ಆಡಳಿತ ಸಮಿತಿ ಮಕ್ತೇಸರ ರವೀಂದ್ರ ಪವಾರ್.
ವಾಂಗಡ ಗ್ರಾಮಸ್ಥರು ಸ್ವತಃ ಬಣ್ಣದ ಕಾಗದದಲ್ಲಿ ವಾಫರ್ ತಯಾರಿಸುತ್ತಾರೆ. ಅದದ ಬುಡಕ್ಕೆ ಎಣ್ಣೆಯಲ್ಲಿ ಅದ್ದಿದ ಬೆಂಕಿಯುಂಡೆಯೊಂದನ್ನು ಕಟ್ಟಿ, ಹೊಗೆ ತುಂಬಲಾಗುತ್ತದೆ. ಹೊಗೆ ತುಂಬಿ ಒತ್ತಡ ಹೆಚ್ಚುತ್ತಿದ್ದಂತೆ ವಾಫರ್ ಹೊಗೆಯ ಒತ್ತಡಕ್ಕೆ ಮೇಲೆ ಹಾರುತ್ತದೆ. ಎಂದರೆ Launch ಆಗತ್ತದೆ. ಕಿಮೀಗಟ್ಟಲೆ ಎತ್ತರ ಹಾರುವ ದೃಶ್ಯವನ್ನು ಜನ ನೋಡಿ ಆನಂದಿಸುತ್ತಾರೆ.
ಜಾತ್ರೆಯ ಅಂಗವಾಗಿ ಭಾನುವಾರ ವನಭೋಜನ ಕಾರ್ಯಕ್ರಮ ನಡೆಯಿತು. ದೇವರನ್ನು ಗೋವಾ ಗಡಿಯಲ್ಲಿರುವ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಅಡುಗೆ ಮಾಡಿ ಪ್ರಸಾದ ಭೋಜನ ಮಾಡಲಾಯಿತು. ವನಭೋಜನದ ನಂತರ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಭಕ್ತಾದಿಗಳ ಮನೆಗಳ ಎದುರು ಪೂಜೆ ಸ್ವೀಕರಿಸುತ್ತಾ ವಾಪಸ್ ದೇವಸ್ಥಾನಕ್ಕೆ ಕರೆತರಲಾಯಿತು. ದೇವರ ಪಲ್ಲಕ್ಕಿ ತೆರಳುವ ಮಾರ್ಗದಲ್ಲಿ ಭಕ್ತರು, ಆಕಾಶ ಬುಟ್ಟಿಗಳಿಂದ ಕಮಾನು ಮಾಡಿ, ರಂಗೋಲಿ ಹಾಕಿ ಸ್ವಾಗತಿಸಿದರು. ದೇವರ ಉತ್ಸವ ಮೂರ್ತಿ ದೇವಸ್ಥಾನಕ್ಕೆ ಬರುವ ಹೊತ್ತಿಗೆ ಸೋಮವಾರ ಮಧ್ಯಾಹ್ನ 4 ಗಂಟೆ ಕಳೆದಿತ್ತು. ನಂತರ ಹರಾಜು, ದೇವರ ಸಮುದ್ರ ಸ್ನಾನ, ಮಹಾ ಮಂಗಳಾರತಿಯೊಂದಿಗೆ ಕಾರ್ತಿಕ ಜಾತ್ರೆ ಸಂಪನ್ನವಾಯಿತು.