

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಣೆ, ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಡಿದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಸೇರಿ 30 ಮಂದಿ ಚಳವಳಿಗಾರರಿಗೆ ಡಿ.27ರ ಬೆಳಗ್ಗೆ 11ಕ್ಕೆ ಗೌರವ ಸಮರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯೂರು ನಾಗರಿಕ ಸಮಿತಿ ಪದಾಧಿಕಾರಿಗಳು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಹೊರಕೇರಪ್ಪ, ವಿವಿ ಸಾಗರಕ್ಕೆ ಭದ್ರಾ ನೀರು ಹರಿಸಲು ಅನೇಕ ವರ್ಷ ಹೋರಾಟ ನಡೆಸಲಾಗಿದೆ. ಇದರಲ್ಲಿ ಪತ್ರಕರ್ತರು, ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಅದರ ಪ್ರತಿಫಲವಾಗಿ ಮೈದುಂಬಿ ಹರಿಯುತ್ತಿದೆ. ಈ ಸಂತಸದ ಸಂದರ್ಭ ಬಾಗಿನ ಸಮರ್ಪಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಸ್ತುತ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದು ವೇಗ ಪಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೂ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಮಹೇಶ್ ಮಾತನಾಡಿ, ಅಂದು ಕೃಷಿ ಉತ್ಪನ್ನಗಳನ್ನು ಬಾಗಿನದಲ್ಲಿ ಇರಿಸಿ ಸಮರ್ಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಮಿತಿ ಮುಖಂಡ ಧನಂಜಯಕುಮಾರ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜು, ನರೇನಹಳ್ಳಿ ಎನ್.ಅರುಣ್‌ಕುಮಾರ್, ಕೂನಿಕೆರೆ ರಾಮಣ್ಣ ಇತರರಿದ್ದರು.