

ತುಮಕೂರು: ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ತುಮಕೂರು ವಿವಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ.
ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ 9000 ಅಂತಿಮ ವರ್ಷದ ಪದವಿ, 1600 ಸ್ನಾತಕೋತ್ತರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಪರೀಕ್ಷೆ ದಿನಾಂಕ ಘೋಷಣೆಯಾಗಲಿದೆ.
ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಉಳಿಸಿಕೊಂಡಿರುವ ವಿಷಯಗಳಿಗೂ ಪರೀಕ್ಷೆ ನಡೆಯಲಿದ್ದು, ಪದವಿ ಪೂರ್ಣಗೊಳಿಸಲು ವಿವಿ ಅವಕಾಶ ಮಾಡಿಕೊಡಲಿದೆ. ಪದವಿ ತರಗತಿಗಳಿಗೆ ಪಠ್ಯಬೋಧನೆ ಪೂರ್ಣವಾಗಿದ್ದು, ಅವರಿಗೆ ಪರೀಕ್ಷೆಗೂ ಪೂರ್ವದಲ್ಲಿ ಮತ್ತೆ ತರಗತಿ ಮಾಡುವುದು ಕಷ್ಟವಾಗಬಹುದು. ಆದರೆ, ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ತರಗತಿಗೆ ಹಾಜರಾಗಿದ್ದು, ಈಗ ಅವರು ಬಯಸಿದರೆ ಕೊಠಡಿಯಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ವಿವಿ ಚಿಂತಿಸಿದೆ.
ಗ್ರಾಮೀಣ ಭಾಗದ ಪಿಜಿ ವಿದ್ಯಾರ್ಥಿಗಳು ತುಮಕೂರಿನ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗದಂತೆ ಪರೀಕ್ಷಾ ಸಮಯ ಬದಲಾವಣೆ ಹಾಗೂ ಪರೀಕ್ಷಾ ಕೇಂದ್ರಗಳನ್ನು ಆಯಾ ವಿಭಾಗಗಳಲ್ಲಿ ಮಾಡುವ ಬಗ್ಗೆಯೂ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷ ಸೆಪ್ಟಂಬರ್ 1ರಿಂದ ಆರಂಭವಾಗಲಿದ್ದು, ಆನ್‌ಲೈನ್ ಮೂಲಕ ತರಗತಿ ಆರಂಭವಾಗಲಿದೆ, ಅಕ್ಟೋಬರ್ ನಂತರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರದ ಆದೇಶವಿದೆ.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರ ವಿದ್ಯಾರ್ಥಿ ಸ್ನೇಹಿಯಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ಉದ್ಯೋಗದ ಭವಿಷ್ಯಕ್ಕೆ ಪರೀಕ್ಷೆಯಿಂದ ಅನುಕೂಲವಾಗಲಿದೆ. ಟಿ.ಎಸ್.ಸುನೀಲ್‌ಪ್ರಸಾದ್ ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ ನಮ್ಮ ಅನುಕೂಲಗಳಿಗೆ ತಕ್ಕಂತೆ ಪರೀಕ್ಷೆ ನಡೆಸಲು ಸರ್ಕಾರ ವಿವಿಗೆ ಅವಕಾಶ ನೀಡಿದ್ದು ನಾವು ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆ ನಡೆಸಲು ಪೂರ್ವ ತಯಾರಿ ನಡೆಸಿದ್ದೇವೆ, ಪ್ರಸ್ತುತ ಸವಾಲುಗಳಿಗೆ ಅನುಗುಣವಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು. ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ