ಸಿ. ಎಸ್. ಪಾಟೀಲ ಸಮೂಹ ಶಾಲೆಯಲ್ಲಿ ವಿವಿಪ್ಯಾಟ್ ಪ್ರದರ್ಶನ

07GDG09
Published on

 ಗದಗ : ಜಗತ್ತಿನಲ್ಲಿಯೇ ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನವು  ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ಅರ್ಹ ಮತದಾರರು  ತಪ್ಪದೇ ತಮ್ಮ ಅಮೂಲ್ಯ ಮತ ಚಲಾಯಿಸಬೇಕು ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿಯಿಂದ ಬೆಟಗೇರಿಯ ಸಿ.ಎಸ್. ಪಾಟೀಲ ಸಮೂಹ    ಶಾಲೆಯ  ವಾರ್ಷಿಕೋತ್ಸವ ಸ್ನೇಹ ಸಮ್ಮೇಳನ ಮತ್ತು ಪಾಲಕರ ದಿನಾಚರಣೆ  ನಿಮಿತ್ತ ಸೋಮವಾರದಂದು  ಮತಗಟ್ಟೆ 55,56 ರಲ್ಲಿ  ಆಯೋಜಿಸಲಾದ ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಶಾಲಾ ಮಕ್ಕಳ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಸ್ತುತಪಡಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ಮತದಾನದಿಂದ ದೂರ ಉಳಿಯದೇ ನಮ್ಮ ಮತ ನಮ್ಮ ಹಕ್ಕು ಎಂಬ ಭಾವನೆಯೊಂದಿಗೆ ರಾಷ್ಟ್ರೀಯ ಸೇವೆ ನನ್ನ ಕರ್ತವ್ಯ ಎಂಬ ಭಾವನೆಯೊಂದಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ಶಕ್ತಿ ಹಾಗೂ ಜವಾಬ್ದಾರಿ ಕುರಿತು  ಕುಟುಂಬದ ಸದಸ್ಯರಿಗೆ ತಿಳಿಸಿಕೊಡಬೇಕು  ಎಂದು ಆರ್.ಎಸ್. ಬುರುಡಿ ತಿಳಿಸಿದರು.

ಪ್ರತಿ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಹಾಗೂ ವಿ.ವಿ.ಪ್ಯಾಟ ಪೆಟ್ಟಿಗೆ ಇಡಲಾಗುತ್ತದೆ. ಮತದಾರ ಮತಗಟ್ಟೆಗೆ ಮತಚಲಾಯಿಸಲು ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವದನ್ನು ಖಚಿತಪಡಿಸಿಕೊಂಡು ಬ್ಯಾಲೇಟ್ ಯುನಿಟನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನಂತರ ಕೆಂಪು ದೀಪ ಹಾಗೂ ಬೀಪ್ ಸದ್ದು ಮತದಾನವಾಗಿರುವದನ್ನು ಖಚಿತಪಡಿಸುತ್ತದೆ. ಬಳಿಕ ಪಕ್ಕದಲ್ಲಿರುವ ವಿ.ವಿ.ಪ್ಯಾಟಯಂತ್ರದಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆಯನ್ನು ಒಳಗೊಂಡಿರುವ ಚೀಟಿಯನ್ನು ಏಳು ಸೆಕೆಂಡವರೆಗೆ ಮತದಾರ ನೋಡಿ ಮತದಾನವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ  ಎಂದರು.  

ಈ ಸಂದರ್ಭದಲ್ಲಿ  ಸೆಕ್ಟರ್ ಅಧಿಕಾರಿ ಶಿವಕುಮಾರ ಕುರಿಯವರ, ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರುಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net