

ಸೋಮವಾರಪೇಟೆ:ಕೊಡಗು ವಿವಿ ಮುಚ್ಚುವ ಸರ್ಕಾರದ ಕ್ರಮ ಖಂಡನೀಯ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಹೇಳಿದ್ದಾರೆ. ಕೊಡಗು ವಿವಿ, ಹಲವು ದಶಕಗಳ ಕನಸು. ಹಿಂದಿನ ಸರ್ಕಾರ ಅದನ್ನು ಸಾಕಾರಗೊಳಿಸಿದೆ. ಯಾವುದೇ ಸರ್ಕಾರವಾದರೂ ಅನುದಾನ ಒದಗಿಸಿ ಅವುಗಳನ್ನು ಉಳಿಸಿಕೊಳ್ಳಬೇಕಾಗಿರುವುದು ಕರ್ತವ್ಯ. ಅನುದಾನ ನೀಡದೆ ವಿ.ವಿ.ಮುಚ್ಚುವ ಕ್ರಮ ಸರಿಯಲ್ಲವೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಕೊಡಗಿನ ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯನ್ನೇ ಅವಲಂಬಿಸಿ ಹೈರಾಣಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವಿ.ವಿ.ಪ್ರಾರಂಭದಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಳಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಜಿಲ್ಲೆಯ ಶಾಸಕರು, ಸಂಸದರು ಪಕ್ಷಾತೀತವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೊಡಗು ವಿವಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಅನುದಾನ ಒದಗಿಸಲು ಶ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.