ಆರಂಭಗೊಳ್ಳದ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ

12-09-rama-vulture2
Published on

* ಸಿಗುತ್ತಿಲ್ಲ ವನ್ಯ ಜೀವಿ ಮಂಡಳಿ ಅನುಮತಿ

* ಬನ್ನೇರುಘಟ್ಟದಲ್ಲಿ ನಿರ್ಮಾಣ

ಗಂಗಾಧರ ಬೈರಾಪಟ್ಟಣ ರಾಮನಗರ

ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿ ಅಭಿವೃದ್ಧಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭಕ್ಕೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣ ಇಲ್ಲ.

ಪರಿಸರ ರಕ್ಷಕರೂ ಆಗಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಇವುಗಳ ಸಂಖ್ಯೆ ಹೆಚ್ಚಳಕ್ಕೆ ರಾಮನಗರದ ರಾಮದೇವರ ಬೆಟ್ಟದಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರವನ್ನು ಆರಂಭಿಸುವ ಸಂಬಂಧ 2020ರ ಮಾರ್ಚ್‌ನಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2 ಕೋಟಿ ರೂ. ಅನುದಾನ ಘೋಷಿಸಿದ್ದರು.

ಆದರೆ, ರಾಮನಗರದಲ್ಲಿ ಆರಂಭಗೊಳ್ಳಬೇಕಿದ್ದ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಿ ಅಲ್ಲಿಯೇ ಅಭಿವೃದ್ಧಿ ಕೇಂದ್ರ ನಿರ್ಮಾಣವೂ ಆಗಿದೆ. ಆದರೆ ಕಾರ್ಯಾರಂಭ ಮಾಡಲು ಅನುಮತಿ ಇನ್ನು ದೊರೆತಿಲ್ಲ.

ಏನಾಗಿದೆ?

ಬ್ರೀಡಿಂಗ್ ಕೇಂದ್ರ ಸ್ಥಾಪನೆ ಮಾಡಬೇಕಾದರೆ ಒಂದಿಷ್ಟು ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡಲೇಬೇಕು. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಉಪ ನಿರ್ದೇಶಕ ಡಾ.ವಿಬು ಪ್ರಕಾಶ್ ಮಾರ್ಗದರ್ಶನದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಕಾರ್ಯನಿರ್ವಹಿಸಬೇಕು. ಇದರಂತೆ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಬೇಕಾದರೆ ಬ್ರೀಡಿಂಗ್ ಕೇಂದ್ರ ಪ್ರಾಣಿ ಸಂಗ್ರಹಾಲಯದ ಒಳಗೆ ಅಥವಾ ಅದರಿಂದ 5 ಕಿ.ಮೀ. ವ್ಯಾಪ್ತಿಯಿಂದ ದೂರವೇ ಇರಬೇಕು. ಇಲ್ಲವಾದರೆ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಬರುವ ರೋಗಗಳಿಗೆ ಅತಿ ಸುಲಭವಾಗಿ ಬ್ರೀಡಿಂಗ್ ಕೇಂದ್ರದ ರಣಹದ್ದುಗಳು ತುತ್ತಾಗುತ್ತವೆ ಎನ್ನುವ ಆತಂಕ ಇದೆ. ಇದರ ಹೊರತಾಗಿಯೂ ಬನ್ನೇರುಘಟ್ಟದಲ್ಲಿಯೇ ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣವಾಗಿದೆ, ಜತೆಗೆ, ರಾಷ್ಟ್ರೀಯ ಉದ್ಯಾನದಲ್ಲಿ ಬ್ರೀಡಿಂಗ್ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಅನುಮತಿ ಪಡೆದುಕೊಳ್ಳಬೇಕಿದೆ. ಇದಿಲ್ಲದೆ, ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭ ಮಾಡುವಂತಿಲ್ಲ. ಈ ಸಂಬಂಧ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ರಾಜ್ಯ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ವನ್ಯ ಜೀವಿ ಮಂಡಳಿ ಅನುಮತಿ ಪಡೆದುಕೊಳ್ಳಬೇಕಾದರೆ ಕನಿಷ್ಠ ಒಂದೂವರೆ ವರ್ಷ ಕಾಲ ಕಾಯಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

ಏನಿದು ಯೋಜನೆ?

ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ 15 ವರ್ಷಗಳ ಯೋಜನೆಯಾಗಿದ್ದು, ಪ್ರಸ್ತುತ ಇರುವ ರಣಹದ್ದು ಧಾಮದಿಂದ ಕನಿಷ್ಠ 5 ಕಿ.ಮೀ. ದೂರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ಯೋಜನಾ ವರದಿಯಲ್ಲಿ ನಮೂದಾಗಿತ್ತು. ಮೊದಲಿಗೆ ಕನಿಷ್ಠ 25 ಜತೆ ಉದ್ದ ಕೊಕ್ಕಿನ ರಣಹದ್ದುಗಳನ್ನು ಸಂತಾನೋತ್ಪತ್ತಿಗಾಗಿ ಬಳಕೆ ಮಾಡಿಕೊಳ್ಳಲು ಯೋಜನೆಯಲ್ಲಿ ವಿವರಿಸಲಾಗಿದೆ. ಸಂತಾನೋತ್ಪತ್ತಿಗೆ ಬಳಕೆ ಮಾಡುವ ರಣಹದ್ದುಗಳನ್ನು ಮತ್ತು ಇವುಗಳಿಂದ ಪಡೆದ ಮರಿಗಳನ್ನು ತಜ್ಞರ ನಿಗಾವಣೆಯಲ್ಲಿ ಇಟ್ಟು ಅವುಗಳ ಚಲನವಲನಗಳನ್ನು ಸಂಪೂರ್ಣ ತಿಳಿದುಕೊಂಡ ಮೇಲೆ ಅವುಗಳನ್ನು ಸ್ವತಂತ್ರಗೊಳಿಸಲಾಗುತ್ತದೆ. ಹೀಗೆ ಮಾಡಲು ಕನಿಷ್ಠ 6-7 ವರ್ಷ ಬೇಕಾಗುತ್ತದೆ.

ಆತಂಕ ಏನು?

ಬನ್ನೇರುಘಟ್ಟದಲ್ಲಿ ಸಂತಾನೋತ್ಪತ್ತಿ ಕೇಂದ್ರ ಆರಂಭ ವಿಳಂಬವಾದಷ್ಟೂ, ಈಗಾಗಲೇ ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿಯೇ ರಾಮನಗರದಿಂದ ಕಣ್ಮರೆಯಾದರೂ ಅಚ್ಚರಿಪಡಬೇಕಿಲ್ಲ. ಈಗಾಗಲೇ 5-6 ಉದ್ದ ಕೊಕ್ಕಿನ ರಣಹದ್ದುಗಳು ಮಾತ್ರ ಈ ಭಾಗದಲ್ಲಿ ಕಾಣಸಿಗುತ್ತಿದ್ದು, ಒಂದು ಜೋಡಿ ಮಾತ್ರ ಪ್ರತಿ ವರ್ಷ ಕಳೆದ ಎರಡ್ಮೂರು ವರ್ಷಗಳಿಂದ ಮೊಟ್ಟೆ ಇಟ್ಟು, ಮರಿಗಳಿಗೆ ಜನ್ಮ ನೀಡುತ್ತಿವೆ. ಪರಿಸರದಲ್ಲಿ ಹೊಂದಿರುವ ರಣಹದ್ದುಗಳು ಇದ್ದರಷ್ಟೇ, ಸಂತಾನೋತ್ಪತ್ತಿ ಕೇಂದ್ರದಲ್ಲಿ ಜನ್ಮ ಪಡೆಯುವ ರಣಹದ್ದುಗಳು ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯ. ಇದನ್ನು ಅರಣ್ಯ ಇಲಾಖೆ ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.

ಉದ್ದ ಕೊಕ್ಕಿನ ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇವು ಇಲ್ಲವಾದರೆ ಪರಿಸರಕ್ಕೆ ಖಂಡಿತವಾಗಿ ಕಂಟಕವಿದೆ. ಬನ್ನೇರುಘಟ್ಟದಲ್ಲಿ ಸ್ಥಾಪಿಸಿರುವ ಸಂತಾನೋತ್ಪತ್ತಿ ಕೇಂದ್ರವನ್ನಾದರೂ ಕಾರ್ಯಾಚರಣೆ ಮಾಡಲು ಬಳಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.ಬಿ.ಶಶಿಕುಮಾರ್, ಕಾರ್ಯದರ್ಶಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್, ರಾಮನಗರರಣಹದ್ದು ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣಗೊಂಡು ವರ್ಷವೇ ಕಳೆದಿದೆ. ಆದರೆ ನಿಯಮಗಳ ತೊಡಕಿನಿಂದಾಗಿ ಕಾರ್ಯಾರಂಭ ಮಾಡಿಲ್ಲ. ವನ್ಯ ಜೀವಿ ಮಂಡಳಿಯಿಂದ ಅನುಮತಿ ಬೇಕಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ನಂತರ ಕೇಂದ್ರ ಕಾರ್ಯಾರಂಭ ಮಾಡಲಿದೆ.ಸೂರ್ಯ ಸೇನ್,ಡಿಸಿಎಫ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net