ರೈತರು ನೇರ ಖರೀದಿಗೆ ಒಪ್ಪಿದರೆ ಶೀಘ್ರ ಪರಿಹಾರ, ಶಾಸಕ ಕೃಷ್ಣನಾಯ್ಕ ಹೇಳಿಕೆ

SABHE
ಹೂವಿನಹಡಗಲಿಯ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೃಷ್ಣನಾಯ್ಕ ಬುಧವಾರ ಮಾತನಾಡಿದರು. ಪುರಸಭೆ ಆಡಳಿತಾಧಿಕಾರಿಯೂ ಆದ ಎಸಿ ಟಿ.ವಿ.ಪ್ರಕಾಶ, ತಹಸೀಲ್ದಾರ್ ವಿ.ಕಾರ್ತಿಕ್ ಇತರರಿದ್ದರು.
Published on

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರು ನೇರ ಖರೀದಿಗೆ ಒಪ್ಪಿದರೆ ಶೀಘ್ರವೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಒಂದೇ ಬಾರಿಗೆ ಇತ್ಯರ್ಥ (ಕನ್ಸೆಂಟ್ ಅವಾರ್ಡ್) ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಬುಧವಾರ ಮಾತನಾಡಿದರು. ಜಂಟಿ ಸರ್ವೇ ಮತ್ತು ಆರ್‌ಆರ್‌ಗೆ ಕನಿಷ್ಠ ನಾಲ್ಕು ವರ್ಷ ಬೇಕಾಗುತ್ತದೆ. ಆದ್ದರಿಂದ ಸರ್ಕಾರ ನಿಗದಿಪಡಿಸಿದ ದರಕ್ಕೆ ಸಂತ್ರಸ್ತ ರೈತರು ಒಪ್ಪಿಗೆ ಕೊಟ್ಟರೆ ತಕ್ಷಣ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನ ಹೊಸಹಳ್ಳಿ ಮತ್ತು ಅಂಗೂರು ಗ್ರಾಮಗಳ 97ಎಕರೆ ಭೂಮಿಯ ಸರ್ವೇ ಕಾರ್ಯ ಮುಗಿದಿದ್ದು, ಕಡತಗಳು ಪ್ರಸ್ತುತ ಆರ್.ಆರ್. ಇಲಾಖಾ ಹಂತದಲ್ಲಿದೆ. ರೈತರಿಗೆ ಪರಿಹಾರ ನೀಡಲು ಇಲಾಖೆ ಅಥವಾ ಸರ್ಕಾರದ ಬಳಿ ಹಣದ ಕೊರತೆಯಿಲ್ಲ.

ಈಗಾಗಲೇ ಸಂತ್ರಸ್ತ ರೈತರ ಪಟ್ಟಿ ಮತ್ತು ಅಗತ್ಯ ಮಾಹಿತಿಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಪಡೆಯಲಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆಯ ಪೈಪ್‌ಗಳನ್ನು ಒಡೆದು ಅಕ್ರಮವಾಗಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ವ್ಯಾಪಕ ದೂರುಗಳು ಬಂದಿವೆ. ಪೈಪ್‌ಗಳನ್ನು ನಾಶಪಡಿಸಿದವ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯೋಜನೆಯ ಪಂಪ್‌ಸೆಟ್ ಮೋಟರ್ ಪದೇ ಪದೆ ದುರಸ್ತಿಗೆ ಬರುತ್ತಿರುವ ದೂರುಗಳಿವೆ. ಇದಕ್ಕಾಗಿ ಹೆಚ್ಚುವರಿ ಮೋಟರ್ ಅಳವಡಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೈಪ್‌ಗಳ ಸೋರಿಕೆಗೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಬಿಸಿಯೂಟ ಯೋಜನೆಗೆ ಮತ್ತು ಅಂಗನವಾಡಿಗಳಿಗೆ ಆಹಾರ ಧಾನ್ಯ ಪೂರೈಸುವ ಗುತ್ತಿಗೆದಾರರು, ಆರಂಭದಲ್ಲಿ ತೋರಿಸಿರುವ ಗುಣಮಟ್ಟದ ಸ್ಯಾಂಪಲ್‌ನ್ನೇ ನಿತ್ಯ ಪೂರೈಸಬೇಕು. ಸ್ಯಾಂಪಲ್ ಒಂದು ಪೂರೈಕೆ ಮತ್ತೊಂದು ಆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಆಡಳಿತಾಧಿಕಾರಿಯೂ ಆದ ಎಸಿ ಟಿ.ವಿ.ಪ್ರಕಾಶ, ತಹಸೀಲ್ದಾರ್ ವಿ.ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net