ಮೆಕಾನಿಕ್ ಪುತ್ರಿಗೆ 13 ಚಿನ್ನದ ಪದಕ; ವಿಟಿಯು ಘಟಿಕೋತ್ಸವದಲ್ಲಿ ವಿಜಯವಾಣಿ ಜತೆ ಸಾಧಕಿಯರ ಮನದಾಳ

VTU
Published on

‘ತಂದೆ ಸತ್ಯಸಾಯಿ ಆಟೋರಿಕ್ಷಾ ಮೆಕಾನಿಕ್. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೆ. ಆದರೂ, ಕುಟುಂಬ ಸದಸ್ಯರು ಓದಲು ಪ್ರೇರಣೆ ತುಂಬಿದರು. ಮನ ಮುಟ್ಟುವಂತೆ ಬೋಧನೆ ಮಾಡಿದ ಪ್ರಾಧ್ಯಾಪಕರು ಹಾಗೂ ತಂದೆ-ತಾಯಿಗೆ ನನ್ನ ಸಾಧನೆ ಶ್ರೇಯಸ್ಸು ಸಲ್ಲುತ್ತದೆ’.

ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಶನಿವಾರ ಜರುಗಿದ 19ನೇ ಘಟಿಕೋತ್ಸವದಲ್ಲಿ 13 ಚಿನ್ನದ ಪದಕಗಳಿಗೆ ಭಾಜನರಾದ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಮಹಿಮಾ ರಾವ್ ಮನದಾಳದ ಮಾತು.

‘ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಭಾಗಿಯಾದರೆ ಕಲಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಅದು ತಪ್ಪು. ನಾನು ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದೆ. ತಿಂಗಳಿಗೆ ನಾಲ್ಕೈದು ಕಾರ್ಯಕ್ರಮ ಪ್ರಸ್ತುತಪಡಿಸುತ್ತೇನೆ. ಕೆಲವೊಮ್ಮೆ ರಾತ್ರಿ ಕಾರ್ಯಕ್ರಮವಿದ್ದರೆ, ಮಾರನೇ ದಿನ ಬೆಳಗ್ಗೆಯೇ ಪರೀಕ್ಷೆ ಇರುತ್ತಿತ್ತು. ಎರಡನ್ನೂ ಸರಿಯಾಗಿ ನಿಭಾಯಿಸುತ್ತಿದ್ದೆ. ಬಿಡುವು ಸಿಕ್ಕಾಗ ಓದುತ್ತಿದ್ದೆ. ಈ ಸಲ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿದ್ದೇನೆ. ಪಠ್ಯೇತರ ಚಟುವಟಿಕೆಯಿಂದ ಶರೀರ, ಮನಸ್ಸಿಗೆ ನವಚೈತನ್ಯ ಸಿಗುತ್ತದೆ. ಏಕಾಗ್ರತೆಯಿಂದ ಅಭ್ಯಸಿಸಲು ಸಾಧ್ಯವಾಗುತ್ತದೆ’ ಎಂದು ಮಹಿಮಾ ಹೇಳಿದರು. ಅತಿಥಿ ಉಪನ್ಯಾಸಕಿಯಾಗಿರುವ ಇವರಿಗೆ ಭವಿಷ್ಯದಲ್ಲಿ ಬೋಧನಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆನ್ನುವ ಆಸೆ.

ಸನ್ಮತಿಗೆ 11 ಪದಕ: ಮೂಡಬಿದಿರೆಯ ಮಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿನಿ ಸನ್ಮತಿ ಪಾಟೀಲ 11 ಪದಕ ಪಡೆದು ಸಂಭ್ರಮಿಸಿದರು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕದರಮಂಡಲಗಿಯ ಸನ್ಮತಿ ಅವರ ತಂದೆ ಶ್ರೀಕಾಂತ ಶಿವಮೊಗ್ಗ ಪಾಲಿಟೆಕ್ನಿಕ್​ನಲ್ಲಿ ಪ್ರಾಚಾರ್ಯರು. ತಾಯಿ ಮಾಧುರಿ ವಕೀಲೆ. ‘ಬೆಂಗಳೂರಿನ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದೇನೆ. ಮಾಸ್ಟರ್ ಆಫ್ ಸೈನ್ಸ್ ಓದಿ ತಾಂತ್ರಿಕ ಕ್ಷೇತ್ರದಲ್ಲೇ ಹೊಸತೇನಾದರೂ ಸಾಧಿಸುವ ಹಂಬಲವಿದೆ’ ಎನ್ನುತ್ತಾರೆ ಸನ್ಮತಿ.

ಉನ್ನತ ಸ್ಥಾನಕ್ಕೇರುವ ಆಸೆ: ‘ಬೆಂಗಳೂರಿನ ಕಂಪನಿಯೊಂದರಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೇ ಕಂಪನಿಯಲ್ಲಿ ಉನ್ನತ ಸ್ಥಾನಕ್ಕೇರುವ ಆಸೆ ಇದೆ. ಅವಕಾಶ ಸಿಕ್ಕರೆ ಬೋಧನೆಯತ್ತ ಹೊರಳುವೆ’ ಎನ್ನುತ್ತಾರೆ 7 ಚಿನ್ನದ ಪದಕಗಳ ಗೌರವಕ್ಕೆ ಪಾತ್ರರಾದ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿನಿ ಜಿ.ಎಸ್.ವಿದ್ಯಾ.

ತಂದೆಯೇ ಪ್ರೇರಣೆ: ‘ನಮ್ಮದು 50 ಎಕರೆ ಜಮೀನಿದೆ. ಅಡಕೆ, ತೆಂಗು, ಕಾಳುಮೆಣಸು, ಭತ್ತ ಬೆಳೆಯುತ್ತೇವೆ. ತಂದೆ ಮುರಳೀಧರ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಬಳಸಿಕೊಂಡು ಒಂದಿಲ್ಲೊಂದು ಪ್ರಯೋಗ ಮಾಡುತ್ತಾರೆ. ಇದರಿಂದ ಪ್ರೇರಣೆಗೊಂಡು ಇಂಜಿನಿಯರಿಂಗ್ ಕೋರ್ಸ್​ಗೆ ಸೇರಿದೆ.

ತಾಂತ್ರಿಕ ಕ್ಷೇತ್ರದಲ್ಲಿ ನಮ್ಮ ದೇಶ ಜಗತ್ತಿಗೆ ನಾಯಕನಾಗಬೇಕು. ಇದಕ್ಕೆ ನಾನು ಕೊಡುಗೆ ನೀಡಬೇಕು ಎಂದುಕೊಂಡಿದ್ದೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿನಿ, 6 ಪದಕ ವಿಜೇತೆ ಸಿಂಧೂರ ಸರಸ್ವತಿ ಮನದಾಳ ಬಿಚ್ಚಿಟ್ಟರು.

ಪದವಿ ಪ್ರದಾನ 

ಬಿ.ಇ. ವಿಭಾಗದಲ್ಲಿ 58,825, ಬಿ.ಆರ್ಕ್​ನಲ್ಲಿ 744, ಎಂಬಿಎದಲ್ಲಿ 4,606, ಎಂಸಿಎನಲ್ಲಿ 1,325, ಎಂ.ಟೆಕ್​ನಲ್ಲಿ 1,582, ಎಂ.ಆರ್ಕ್​ನಲ್ಲಿ 39, ಪಿಎಚ್.ಡಿ.ಯಲ್ಲಿ 579 ಮತ್ತು ಎಂ.ಎಸ್ಸಿ ಇಂಜಿನಿಯರಿಂಗ್ ವಿಭಾಗದಲ್ಲಿ 21 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಅನುಪಸ್ಥಿತಿಯಲ್ಲೇ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ನೀಡಲಾಯಿತು.

| ಇಮಾಮಹುಸೇನ್ ಗೂಡುನವರ ಬೆಳಗಾವಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net