ಇಂಜಿನಿಯರಿಂಗ್ ಶಿಕ್ಷಣವನ್ನು ಆಧುನಿಕಗೊಳಿಸುವತ್ತ ವಿಟಿಯು ಮಹತ್ವಪೂರ್ಣ ಹೆಜ್ಜೆ: ಡಾ.ಸದಾಶಿವೇಗೌಡ ಹೇಳಿಕೆ

20
Published on

ಮೈಸೂರು: ಇಂಜಿನಿಯರಿಂಗ್ ಶಿಕ್ಷಣವನ್ನು ಆಧುನಿಕಗೊಳಿಸುವ ಮಹತ್ವಪೂರ್ಣ ಹೆಜ್ಜೆಯೊಂದರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಇಂಜಿನಿಯರಿಂಗ್ ಮುಂದಾಗಿದೆ ಎಂದು ವಿಟಿಯು ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಅಧ್ಯಕ್ಷರೂ ಆದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವೇಗೌಡ ತಿಳಿಸಿದರು.

ಇಂಟರ್‌ಡಿಸಿಪ್ಲಿನರಿ ಅಪ್ಲಿಕೇಷನ್ ಅಕ್ರಾಸ್ ಇಂಜಿನಿಯರಿಂಗ್ ಡೊಮೈನ್ಸ್, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಸೋಮವಾರ ವಿದ್ಯಾವರ್ಧಕ ಕಾಲೇಜಿನಲ್ಲಿ ಆಯೋಜಿಸಿದ್ದ ಎಐ ಾರ್ ಆಲ್ ವಿಷಯ ಕುರಿತ ಐದು ದಿನಗಳ ಬೋಧಕ ಪುನಶ್ಚೇತನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಟಿಯುನ ಪ್ರಥಮ ವರ್ಷದ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಅದರ ಅನ್ವಯಗಳು ಎಂಬ ಹೊಸ ವಿಷಯವನ್ನು ಪರಿಚಯಿಸಲಿದೆ. ಇದರಿಂದ ಇಂಜಿನಿಯರಿಂಗ್ ಶಿಕ್ಷಣವನ್ನು ಆಧುನೀಕರಣಗೊಳಿಸುವ ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದರು.

ಆಧುನಿಕತೆಗೆ ತಕ್ಕಂತೆ ತಾಂತ್ರಿಕ ಅಭಿವೃದ್ಧಿಗೆ ಅನುಗುಣವಾಗಿ ಪಠ್ಯಕ್ರಮದ ನಿರಂತರ ಪರಿಷ್ಕರಣೆ ಅಗತ್ಯವಿದೆ. ಶಿಕ್ಷಣದ ದೈನಂದಿನ ತರಗತಿಗಳಲ್ಲಿ ಮೌಲ್ಯವರ್ಧನೆ ಇಲ್ಲದಿದ್ದರೆ ವಿದ್ಯಾರ್ಥಿಗಳು ನೇರವಾಗಿ ಹೇಳದೆ ಇರಬಹುದು. ಆದರೆ ಅವರು ತೋರಿಸುವ ಆಸಕ್ತಿ ಕೊರತೆಯಿಂದ ಅದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೋಧಕರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಬೇಕು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಬೇಕು ಮತ್ತು ಎಐ ಉಪಕರಣಗಳನ್ನು ಉಪಯೋಗಿಸಿ ಬೋಧನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಬೇಕು. ಬೋಧಕರಿಗೆ ಹೊಸ ತಂತ್ರಜ್ಞಾನಗಳನ್ನು ಕಲಿಯುವಲ್ಲಿ ಸ್ವಯಂಪ್ರೇರಿತರಾಗುವಂತೆ ಹಾಗೂ ವಿದ್ಯಾರ್ಥಿಗಳ ಅಕಾಡೆಮಿಕ್ ಬೆಳವಣಿಗೆಯಲ್ಲಿ ಪಾತ್ರ ವಹಿಸುವಂತೆ ಕೋರಿದರು.

ರೆಡ್ಬಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಡೇಟಾ ಎಂಜಿನಿಯರಿಂಗ್ ಉಪಾಧ್ಯಕ್ಷ ಡಾ.ಮನೋಜ್ ಕುಮಾರ್ ಅವರು ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಬಗ್ಗೆ ಮಾಹಿತಿ ಹಂಚಿಕೊಂಡು, ಎಐ ಅಭಿವೃದ್ಧಿಗೆ ಬೇಕಾದ ಸಮಯ ಮತ್ತು ವೆಚ್ಚ ವರ್ಷಗಳ ಕಾಲ ಕಡಿಮೆಯಾಗಿದೆ. ಇಂದು ಉತ್ತಮ ಸೂಚನೆಗಳೊಂದಿಗೆ ಎಐ ಸಂಪೂರ್ಣ ಅನ್ವಯಗಳನ್ನು ರಚಿಸಬಲ್ಲದು. ಆದಾಗ್ಯೂ, ಮಾನವ ಪರಿಣಿತರ ಪಾತ್ರ ನಿಖರತೆಯುಳ್ಳ ಹಾಗೂ ಸಂದರ್ಭಪ್ರಜ್ಞೆಯುಳ್ಳ ಅನ್ವಯಕ್ಕಾಗಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲಾ ರಾಮಣ್ಣನವರ್, ಉಪ ಪ್ರಾಂಶುಪಾಲರಾದ ಪಿ.ಪ್ರಭಾವತಿ, ಶೈಕ್ಷಣಿಕ ಡೀನ್ ಶೋಭಾಶಂಕರ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಅಧ್ಯಕ್ಷ ಪ್ರೊ. ಕೆ.ಗೋಪಾಲರೆಡ್ಡಿ, ಸಂಯೋಜಕರಾದ ಡಾ.ಎಸ್.ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net