

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ಬೆಳಗಾವಿಯ “ಯುಕ್ತಿ- 2K25”- ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುರುವಾರ ದಿ ೨೦ ರಂದು ಉದ್ಘಾಟಿಸಿಲಾಯಿತು. ಎರಡು ದಿನಗಳ ಈ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ರಾಜ್ಯದ ಇತರ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಂದ ಸುಮಾರು 2000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಾದ ತಾಂತ್ರಿಕ ಸ್ಪರ್ಧೆಗಳು, ಮನರಂಜನೆ ಸ್ಪರ್ಧೆಗಳು, ಮ್ಯಾನೇಜಮೇಂಟ್ ಸ್ಪರ್ಧೆಗಳು, ಪೇಪರ್ ಪ್ರೆಸೆಂಟೇಶನ್, ಕಲೆ ಹಾಗೂ ಸಂಗೀತ/ ನೃತ್ಯಗಳಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲ ಸ್ಪರ್ಧೆಗಳು ಎರಡು ದಿನಗಳ ಕಾಲ ನಡೆಯಲಿವೆ.
ಈ ಕಾರ್ಯಕ್ರಮವನ್ನು ಅಧ್ಯಕ್ಷತೆವಹಿಸಿದ್ದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅವರು ಕನ್ನಡ ಚಿತ್ರರಂಗದ ಯುವ ನಟರಾದ ಶ್ರೀ ವಿಯಾತ್ ಹಾಗೂ ನಟಿ ಕುಮಾರಿ ಸಂಜನಾ, ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ್, ಹಣಕಾಸು ಅಧಿಕಾರಿ ಡಾ ಪ್ರಶಾಂತ ನಾಯಕ್ ಜಿ, ಯುಕ್ತಿ -25 ಸಂಯೋಜಕರಾದ ಪ್ರೊ ರೋಹನ್ ಗುರವ್ ಮತ್ತು ಪ್ರೊ ಚೈತ್ರಾ ಕೆ. ಎಂ. ಉಪಸ್ಥಿತಿಯಲ್ಲಿ ಉದ್ಘಾಟಿಸಿದರು
ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಯುಕ್ತಿ 2025 ರಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಕಾಲೇಜು ಬದುಕಿನ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅವರು, ಕಾಲೇಜು ಅಥವಾ ವಿಶ್ವವಿದ್ಯಾಲಯದ ಜೀವನವು ಕೇವಲ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ್ದಲ್ಲದೆ; ಇದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನದ ಪ್ರಯಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ಕ್ರೀಡೆ, ಸಂಗೀತ, ಚರ್ಚೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಂತಹ ಸಹಪಠ್ಯ ಚಟುವಟಿಕೆಗಳು ನಮ್ಮ ಅಧ್ಯಯನಕ್ಕೆ ಪೂರಕವಾಗಿರುತ್ತವೆ ಮತ್ತು ಅಗತ್ಯ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ. ಇದಲ್ಲದೆ, ಈ ಚಟುವಟಿಕೆಗಳು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಸುಧಾರಿಸುತ್ತವೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ, ಆದರೆ ಸಂಗೀತ, ನೃತ್ಯ ಮತ್ತು ಚಿತ್ರಕಲೆಯಂತಹ ಸೃಜನಶೀಲ ಚಟುವಟಿಕೆಗಳು ಒತ್ತಡ ನಿರ್ವಹಣೆ ಮತ್ತು ಮಾನಸಿಕವಾಗಿ ಸದೃಢವನ್ನಾಗಿ ಮಾಡುತ್ತವೆ ಎಂದು ಅವರು ಹೇಳಿದರು. ಇವತ್ತಿನ ವಿಶೇಷ ಅತಿಥಿಗಳಾಗಿರುವ ಕನ್ನಡ ಚಿತ್ರರಂಗದ ಯುವ ನಟ ಶ್ರೀ ವಿರಾಟ್ ಹಾಗೂ ನಟಿ ಕುಮಾರಿ ಸಂಜನಾ ಅವರು ಇಂಜಿನಿಯರಿಂಗ್ ಪದವೀಧರರು ಸಹ ಎಂದು ಹೇಳಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಕನಸುಗಳಿಗೆ ಅನುಗುಣವಾಗಿ ಹೊಸ ಅವಕಾಶಗಳಿಗೆ ಬಾಗಿಲು ತೆರೆದುಕೊಳ್ಳಬಹುದು. ಇವತ್ತಿನ ವಿದ್ಯಾರ್ಥಿಗಳು ಇವರಂತೆ ಮೊದಲು ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಿ ನಂತರ ತಮ್ಮ ಕನಸಿನಂತೆ ವಿಭಿನ್ನ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ಸಾಧನೆ ಮಾಡಬಹುದು ಹಾಗೂ ಇಲ್ಲಿ ಪಡೆದ ಪಡ್ವಿ ಅಥವಾ ಶಿಕ್ಷಣ ಆ ಸಾಧನೆಗೆ ನೆರವಾಗುತ್ತದೆ ಎಂದು ಹೇಳಿದರು. ನಿಮ್ಮ ಜೀವನದಲ್ಲಿ ನೀವು ಏನೇ ಸಾಧಿಸಿದರೂ ಮೊದಲು ಮಾನವರಾಗಿರಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಶ್ರೀ ವಿರಾಟ್, ನಿಮ್ಮ ಕನಸುಗಳನ್ನು ಬೆನ್ನಟ್ಟಿ, ಎಲ್ಲೆಡೆಯಿಂದ ಒಳ್ಳೆಯದನ್ನು ಕಲಿಯಿರಿ, ಎಲ್ಲಾ ಭಾಷೆಗಳನ್ನು ಕಲಿಯಿರಿ, ಆದರೆ ಕನ್ನಡಕ್ಕೆ ತಾಯಿ ಸ್ಥಾನವಿರಲಿ ಎಂದು ಹೇಳಿದರು. ಎಲ್ಲಾ ಭಾಷೆಗಳನ್ನು ಕಲಿಯುವುದರಿಂದ ನಾವು ಬುದ್ಧಿವಂತರಾಗಬಹುದು, ಆದರೆ ಮಾತೃಭಾಷೆಯನ್ನು ಕಲಿಯುವುದರಿಂದ ವ್ಯಕ್ತಿ ಹೃದಯವಂತನಾಗುತ್ತಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ಕುಮಾರಿ ಸಂಜನಾ, ಎಂಜಿನಿಯರ್ ವಿದ್ಯಾರ್ಥಿಯಾಗಿ ನೀವು ಹೆಮ್ಮೆ ಪಡಬೇಕು ಏಕೆಂದರೆ ಎಂಜಿನಿಯರ್‌ಗಳು ಹೊಸ ಮತ್ತು ಅಭಿವೃದ್ಧಿ ಭಾರತದ ಶಿಲ್ಪಿಗಾರರಾಗಿ ಕೆಲಸಮಾಡುತ್ತಾರೆ. ಮೊದಲು ನೀವು ನಿಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಂಡು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಮತ್ತು ನಂತರ ನೀವು ಇಷ್ಟ ಪಟ್ಟ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಹೇಳಿದರು.
ಕುಲಸಚಿವರಾದ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿದರು, ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ. ಎನ್. ಶ್ರೀನಿವಾಸ್ ವಂದಿಸಿದರು. ಯುಕ್ತಿ -25 ಸಂಯೋಜಕ ಪ್ರೊ ರೋಹನ್ ಗುರವ್ ಯುಕ್ತಿ -25 ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶ್ರೀ. ರಾಜೇಶ್ ಕೃಷ್ಣನ್ ಸಂಗೀತ ಸಂಜೆ
ನಂತರ ಗುರುವಾರ ಸಂಜೆ ಪ್ರಖ್ಯಾತ ಹಿನ್ನಲೆ ಗಾಯಕರಾದ ಶ್ರೀ. ರಾಜೇಶ್ ಕೃಷ್ಣನ್ ಹಾಗೂ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಗಾಯಕ ರಾಜೇಶ್ ಕೃಷ್ಣನ್ ಅವರು ಮೆಲೋಡಿ ಗೀತೆಗಳ ಮೂಲಕ ನೆರೆದಿದ್ದ ಬೆಳಗಾವಿ ಜನಸಮೂಹವನ್ನ ಸಂಗೀತದ ಅಲೆಯಲ್ಲಿ ತೇಲಿಸಿದರೇ ಗಾಯಕಿ ಡಾ ಶಮಿತಾ ಮಲ್ನಾಡ್ ಮಾಸ್ ಗೀತೆಗಳನ್ನ ಹಾಡಿ ಜನರನ್ನ ರಂಜಿಸಿದರು.