

ನಿಪ್ಪಾಣಿ: ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ) ದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಐಸಿಟಿಇ)ಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಎಂಬಿಎ ಮತ್ತು ಎಂಸಿಎ ಕೋರ್ಸ್ ನಡೆಸಲು ಅನುಮೋದನೆ ಸಿಕ್ಕಿದ್ದು, ಸುಸಜ್ಜಿತ ನೂತನ ಕಟ್ಟಡದಲ್ಲಿ ತರಗತಿ ನಡೆಸಲಾಗುವುದು.
ಇದೀಗ ಎಲ್‌ಕೆಜಿಯಿಂದ ಪಿಜಿಯವರೆಗೆ ವಿದ್ಯಾದಾನ ಮಾಡುವ ಸಂಸ್ಥೆ ನಮ್ಮದಾಗಿದೆ ಎಂದು ವಿದ್ಯಾ ಸಂವರ್ಧಕ ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.ಸ್ಥಳೀಯ ವಿಎಸ್‌ಎಂಎಸ್‌ಆರ್‌ಕೆಐಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಂಡಳದ ಎಲ್ಲ ಶೈಕ್ಷಣಿಕ ಅಂಗಸಂಸ್ಥೆಗಳಲ್ಲಿ 400 ಶಿಕ್ಷಕರು, ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ವಿಟಿಯುದಿಂದ ನಮ್ಮ ಮಹಾವಿದ್ಯಾಲಯದಲ್ಲಿ ಗಣಿತ ಸಂಶೋಧನಾ ಕೇಂದ್ರಕ್ಕೂ ಅನುಮೋದನೆ ಸಿಕ್ಕಿದ್ದು, ನಾಲ್ವರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯವನ್ನೂ ಆರಂಭಿಸಲಾಗಿದೆ. ವಿಶೇಷವೆಂದರೆ ಮಹಾವಿದ್ಯಾಲಯಕ್ಕೆ ಅನುಮತಿ ಸಿಕ್ಕ ತಕ್ಷಣ ದಾಖಲಾತಿ ಪೂರ್ಣಗೊಂಡಿವೆ ಎಂದರು.
ವೈಸ್ ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ನಿರ್ದೇಶಕ ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಅವಿನಾಶ ಪಾಟೀಲ, ರುದ್ರಕುಮಾರ ಕೋಠಿವಾಲೆ, ಸಂಜಯ ಶಿಂತ್ರೆ, ಸಿಇಒ ಡಾ. ಸಿದ್ದಗೌಡ ಪಾಟೀಲ, ಪ್ರಾಚಾರ್ಯ ಡಾ. ಉಮೇಶ ಪಾಟೀಲ ಉಪಸ್ಥಿತರಿದ್ದರು.