ಬಲ್ಲಮಾವಟಿಯಲ್ಲಿ ವಿಚಾರ ಸಂಕಿರಣ, ಕಾರ್ಯಾಗಾರ

8.npk--1
ಭಾರತ ಕಾಫಿ ಮಂಡಳಿ ಮಡಿಕೇರಿ ಮತ್ತು ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಘದಿಂದ ಬಲ್ಲಮಾವಟಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣವನ್ನು ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಉದ್ಘಾಟಿಸಿದರು. ವಿ.ಚಂದ್ರಶೇಖರ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಡಾ.ಅಕ್ಷತಾ ಇದ್ದರು.
Published on

ನಾಪೋಕ್ಲು: ಕಾಫಿ ಮಂಡಳಿಯ ಮಾಹಿತಿಗಳನ್ನು ಸದುಪಯೋಗಪಡಿಸಿಕೊಂಡು ಕಾಫಿ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಕಾಫಿ ಮಂಡಳಿ ಉಪನಿರ್ದೇಶಕ ವಿ. ಚಂದ್ರಶೇಖರ್ ಹೇಳಿದರು.

ಕಾಫಿ ಮಂಡಳಿ ಭಾರತ ಕಾಫಿ ಮಂಡಳಿ ಮಡಿಕೇರಿ ಮತ್ತು ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಘದ ಸಹಯೋಗದೊಂದಿಗೆ ಬಲ್ಲಮಾವಟಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆ ಮತ್ತು ಅದರ ಪಾಲನೆ, ಪೋಷಣೆ ಹಾಗೂ ಕಾಫಿ ಮಂಡಳಿ ವತಿಯಿಂದ ದೊರೆಯುವ ಸೌಲಭ್ಯ ಕುರಿತು ಆಯೋಜಿಸಿದ್ದ ಶುಕ್ರವಾರ ಮಾಹಿತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಗತಿಪರ ಬೆಳೆಗಾರ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಹಳೆಯ ವಿಧಾನಗಳನ್ನೇ ಅನುಸರಿಸುವ ಬದಲು ಕಾಫಿ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆಯುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕಾಫಿ ಮಂಡಳಿ ಅಧಿಕಾರಿ ಡಾ.ಶಿವಲಿಂಗು, ತದ್ರೂಪಿ ಕಾಫಿ ಗಿಡಗಳನ್ನು ಮಾಡುವ ಮತ್ತು ನೆಡುವ ವಿಧಾನಗಳ ಡಿಜಿಟಲ್ ಪ್ರಾತ್ಯಕ್ಷಿಕೆ ನೀಡಿದರು.

ವಿಜ್ಞಾನಿಗಳಾದ ಡಾ.ಅಕ್ಷಿತಾ, ಕಾಳು ಮೆಣಸು ಹಾಗೂ ಏಲಕ್ಕಿ ಗಿಡಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಿದರು.

ಸುಕ್‌ಡೆನ್ ಸಂಸ್ಥೆಯ ಪ್ರತಿನಿಧಿ ಪ್ರಕೃತಿ, ತಮ್ಮ ಸಂಸ್ಥೆಯಿಂದ ಮರು ಅರಣ್ಯ ಸ್ಥಾಪಿಸುವ ನಿಟ್ಟಿನಲ್ಲಿ ಉಚಿತವಾಗಿ ಗಿಡಗಳನ್ನು ನೀಡುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಪಂ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಸದಸ್ಯರಾದ ಮಣವಟ್ಟಿದ ಕುಶಾಲಪ್ಪ, ಮಾಯಮ್ಮ, ಮಚ್ಚುರ ರವೀಂದ್ರ, ಬಲತ್ ನಾಡು ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಕರವಂಡ ಲವ ನಾನಯ್ಯ, ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪಚೆಟ್ಟೋಳಂಡ ವನು ವಸಂತ್, ಮಂಡಳಿ ವಿಜ್ಞಾನಿ ಚಂದ್ರಶೇಖರ್, ಶಿವಲಿಂಗೇಗೌಡ, ಕಾಫಿ ಮಂಡಳಿಯ ತಜ್ಞರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net