ವಿದ್ಯಾರ್ಥಿಗಳ ನೆರವಿಗೆ ವಿ.ಎಸ್.ಅಯ್ಯಂಗಾರ್ ಟ್ರಸ್ ಸದಾ ಮುಂದು

17-kollegal-2,,,,
Published on

ಕೊಳ್ಳೇಗಾಲ : ವಿ.ಎಸ್.ಅಯ್ಯಂಗಾರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಬಡ ವಿದ್ಯಾರ್ಥಿಗಳ ನೆರವಿಗೆ ಸದಾ ನಿಂತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗೋವಿಂದರಾಜನ್ ಹೇಳಿದರು.

ಪಟ್ಟಣದ ಎಸ್‌ವಿಕೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿಗೆ 1.20 ಲಕ್ಷ ರೂ.ಗಳ ಪ್ರೋತ್ಸಾಹ ಧನದ ಚೆಕ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ನಮ್ಮ ಟ್ರಸ್ಟ್ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ತಾಯಿ ತಂಗಮ್ಮ ಅವರ ಅಭಿಲಾಷೆಯಂತೆ ಬಡ ಹೆಣ್ಣು ಮಕ್ಕಳು ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಥದಲ್ಲಿ ಮೊಟುಕು ಗೊಳಿಸಬಾರದು ಎಂಬ ಕಾರಣಕ್ಕೆ ಟ್ರಸ್ಟ್ ವತಿಯಿಂದ ಆನೇಕ ಸೇವಾ ಕಾರ್ಯ ನಡೆಸಿಕೊಂಡು ಬಂದಿದ್ದೇವೆ ಎಂದರು.

ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್‌ನ ಮೂಲಕ ಪ್ರತಿವರ್ಷವೂ ಎಸ್‌ವಿಕೆ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಇದೇ ಕಾಲೇಜಿನಿಂದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಹೊಂದಿ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಕೋರ್ಸ್ ಮುಗಿಸುವವರೆಗೂ ಪ್ರತಿವರ್ಷ ತಲಾ 25 ಸಾವಿರ ರೂ. ನಂತೆ ಪ್ರೋತ್ಸಾಹದ ರೂಪದಲ್ಲಿ ಹಣ ನೀಡುತ್ತಿದ್ದೇವೆ. ಈ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲೂ ಟ್ರಸ್ಟ್ ಸೇವೆ ಮುಂದುವರೆಸಲಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ವಿಎಸ್ ಅಯ್ಯಂಗಾರ್ ಚಾರಿಟಬಲ್ ಟ್ರಸ್ಟ್ ಕಳೆದ 8 ವರ್ಷಗಳಿಂದ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ವಿಚಾರ, ಅವರ ಕುಟುಂಬ ಸದಸ್ಯರಿಗೆ ಶುಭವಾಗಲಿ, ಇನ್ನಷ್ಟು ಮಕ್ಕಳಿಗೆ ಅನುಕೂಲ ಕಲ್ಪಿಸುವ ಶಕ್ತಿ ದೊರಕುವಂತಾಗಲಿ ಎಂದರು.

ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್ ಮಾತನಾಡಿ, ವಿಎಸ್ ಅಯ್ಯಂಗಾರ್ ಟ್ರಸ್ಟ್‌ನ ಪದಾಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 8 ಕಂಪ್ಯೂಟರ್ ನೀಡಿದ್ದಾರೆ. ಈ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಕಾಲೇಜಿನಲ್ಲಿ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರಾರಂಭಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಈ ಕೋರ್ಸಿನ ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಸಂತಸದ ವಿಚಾರ. ಕಾಲೇಜಿಗೆ 150 ಉತ್ತಮ ಗುಣಮಟ್ಟದ ಕುರ್ಚಿಗಳನ್ನು ನೀಡಿದ್ದು, ಇಂದಿನ ಸಮಾರಂಭದಲ್ಲಿ ಹಿರಣ್ಮಯಿ ಅವರು ಮಕ್ಕಳು ಕೂರಲು ಕುರ್ಚಿ ಖರೀದಿಗಾಗಿ 25 ಸಾವಿರ ರೂ. ದೇಣಿಗೆ ನೀಡಿರುವುದು ಸಹಾ ಸಂತಸದ ವಿಚಾರ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವರ್ಷಾ, ಕಾಲೇಜ್ ಅಭಿವೃದ್ಧಿ ಸಮಿತಿಯ ಶೈಕ್ಷಣಿಕ ಸಲಹೆಗಾರ ನರಸಿಂಹನ್, ಹಿರಿಯ ಉಪನ್ಯಾಸಕ ಮಹದೇವ, ದುಂಡಪ್ಪ ಶಾಂತರಾಜ್, ಶ್ರೀಮತಿ ಧನಲಕ್ಷ್ಮೀ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net