ಮರಗಳಿಗೆ ರಾಖಿ ಕಟ್ಟಿ ‘ವೃಕ್ಷಬಂಧನ’ ಆಚರಣೆ

NARAGUND
Published on

ನರಗುಂದ: ಪ್ರಕೃತಿ ಮಾತೆಗೆ ವಂದನೆ ಸಲ್ಲಿಸಲು ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಗಿಡಗಳಿಗೆ ರಾಖಿ ಕಟ್ಟುವ ಹೊಸ ಸಂಪ್ರದಾಯದೊಂದಿಗೆ ಭಾನುವಾರ ವೃಕ್ಷ ಬಂಧನ ವಿನೂತನ ಕಾರ್ಯಕ್ರಮ ಆಚರಿಸಲಾಯಿತು.

ಸೋಮು ಹೊಂಗಲ ಮಾತನಾಡಿ, ನಮ್ಮೆಲ್ಲರ ಅಗತ್ಯತೆಗಳನ್ನು ಪೊರೈಸುವ ಪ್ರಕೃತಿಗೆ ನಮ್ಮ ನೋವುಗಳನ್ನು ಮರೆಸುವ ಅದ್ಭುತ ಶಕ್ತಿ ಇದೆ. ಸುಂದರ ಪ್ರಕೃತಿ ಮನಸಿಗೆ ಉಲ್ಲಾಸ, ಉತ್ಸಾಹ ತುಂಬುತ್ತದೆ. ನೈಸರ್ಗಿಕವಾಗಿ ಬೆಳೆದಿರುವ ಸಸಿಗಳು ಸಹ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.

ನಮ್ಮನ್ನೆಲ್ಲ ರಕ್ಷಿಸುವ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹೀಗಾಗಿ ಗಿಡಗಳಿಗೆ ರಾಖಿ ಕಟ್ಟುವ ಮೂಲಕ ಅವುಗಳಲ್ಲಿ ಹೊಸ ಬಾಂಧವ್ಯವನ್ನು ಕಂಡುಕೊಳ್ಳಬೇಕು. ಮಕ್ಕಳಲ್ಲಿ ಸಸ್ಯಗಳ ಬಗ್ಗೆ ಆಸಕ್ತಿ ಬೆಳೆಸುವುದು. ಗಿಡಗಳೊಂದಿಗೆ ಹೊಸ ಅನುಬಂಧ ಬೆಳೆಸುವುದು ರಕ್ಷಾ ಬಂಧನವನ್ನು ವೃಕ್ಷ ಬಂಧನ ಕಾರ್ಯಕ್ರಮವನ್ನಾಗಿ ವಿನೂತನವಾಗಿ ಆಚರಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯೇ ಇದರ ಮುಖ್ಯ ಉದ್ದೇಶ ಎಂದರು.

ವೃಕ್ಷ ಬಂಧನ ಕಾರ್ಯಕ್ರಮದ ಅಂಗವಾಗಿ ಚಿಕ್ಕನರಗುಂದ ಗ್ರಾಮದ ವಿವಿಧ ಗಿಡ, ಮರಗಳಿಗೆ ರಾಖಿ ಕಟ್ಟಿ, ವಿಭೂತಿ, ಕುಂಕುಮ ಹಚ್ಚಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಪ್ರಕೃತಿ ಮಾತೆಗೆ ಗೌರವ ಸಮರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net