ವೃಷಭೇಂದ್ರ ಸ್ವಾಮಿ ಶ್ರೇಷ್ಠ ಅಧ್ಯಾಪಕರಾಗಿದ್ದರು

29 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಎಸ್​.ಎಂ. ವೃಷಭೇಂದ್ರಸ್ವಾಮಿ ರಾಷ್ಟ್ರ ಕವಿ ಕುವೆಂಪು ಅವರ ಅಂತರಂಗದ ಶಿಷ್ಯರು. ಅವರೊಬ್ಬ ಶ್ರೇಷ್ಠ ಪ್ರಾಧ್ಯಾಪಕರು ಮಾತ್ರವಲ್ಲ ಉತ್ತಮ ಆಡಳಿತಗಾರರೂ ಆಗಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಎಸ್​.ಎಂ. ವೃಷಭೇಂದ್ರಸ್ವಾಮಿ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಸ್​.ಎಂ. ವೃಷಭೇಂದ್ರಸ್ವಾಮಿ ಅವರ ಮಹಾಪ್ರಬಂಧ ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ ಕುರಿತು ಮಾತನಾಡಿದರು.

ವೃಷಭೇಂದ್ರಸ್ವಾಮಿ ಮಾನವೀಯತೆ ಹಾಗೂ ಹೃದಯವಂತಿಕೆಯ ವ್ಯಕ್ತಿ. ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಗುರುಲಿಂಗ ಕಾಪಸೆ ಅಂತಹವರಿಗೆ ವಿದ್ಯಾ ಗುರುಗಳಾಗಿ ಸೃಜನಶೀಲ ಶಕ್ತಿ ಅರಳುವಂತೆ ಮಾಡಿದವರು. ಕವಿವಿಯಲ್ಲಿ ಪಠ್ಯ ಪುಸ್ತಕ ವಿಭಾಗದ ನಿರ್ದೇಶಕರಾಗಿ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಅನುವಾದಿಸುವ ಕಾರ್ಯ ಮಾಡಿದ್ದಾರೆ. ಉತ್ತಮ ಭಾಷಣಕಾರರಾದ ಅವರು ನಾಡಿನಾದ್ಯಂತ ಸಂಚರಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ್ದಾರೆ ಎಂದರು.

ದತ್ತಿ ದಾನಿ ಡಾ. ಎಸ್​.ಎಂ. ಶಿವಪ್ರಸಾದ ಮಾತನಾಡಿದರು. ಪ್ರೊ. ಸಿ.ಆರ್​. ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು. ಸತೀಶ ತುರಮರಿ, ಡಾ. ಡಿ.ಎಂ. ಹಿರೇಮಠ, ಡಾ. ಮಾರ್ಕಂಡೇಯ ದೊಡಮನಿ, ಬಿ.ಕೆ. ಹೊಂಗಲ, ಡಾ. ಲಿಂಗರಾಜ ಅಂಗಡಿ, ಎಂ.ಎಂ. ಚಿಕ್ಕಮಠ, ಪ್ರಮೀಳಾ ಜಕ್ಕಣ್ಣವರ, ಶಿವಶಂಕರ ಹಿರೇಮಠ, ವೆಂಕಟೇಶ ಮಾಚಕನೂರ, ಶಶಿಧರ ತೋಡಕರ, ಬಿ.ಎಸ್​. ಶಿರೋಳ, ಡಾ. ಸಂಗಮನಾಥ ಲೋಕಾಪುರ, ಇತರರು ಇದ್ದರು.

ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net