14 ರಂದು ‘ವೃಕ್ಷರಾಜ’ ನಾಟಕ ಪ್ರದರ್ಶನ

Drama-games
Published on

ಮೈಸೂರು: ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಏ.14 ರಂದು ಸಂಜೆ 6.30ಕ್ಕೆ ‘ವೃಕ್ಷರಾಜ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಹೈಸ್ನಾಮ್ ತೋಂಬಾ ಅವರ ನಿರ್ದೇಶನದಲ್ಲಿ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ.

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಜಾಗತಿಕ ತಾಪಮಾನ ಕುರಿತ ನಾಟಕ ಇದಾಗಿದೆ. ದಟ್ಟ ಕಾಡಿನ ನಡುವೆ ತನ್ನ ಬೃಹದಾಕಾರವಾಗಿ ಬೆಳೆದ ಮರವೊಂದು ನೂರಾರು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುವುದಲ್ಲದೇ ಪ್ರಕೃತಿಯಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುವಂತೆ ಮತ್ತು ಸಕಲ ಜೀವರಾಶಿಗಳಿಗೂ ಅತ್ಯಗತ್ಯವಾದ ಆಮ್ಲಜನಕವನ್ನು ನೀಡುವ ಮೂಲಕ ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡುತ್ತ ವೃಕ್ಷರಾಜನೆಂದು ಹಿರಿಮೆಗೆ ಭಾಜನವಾಗಿರುತ್ತದೆ. ಪ್ರಸ್ತುತ ನಾಟಕದಲ್ಲಿ ರಾಜನೊಬ್ಬ ದುರಾಸೆಯ ಹಿಂದೆ ಬಿದ್ದು ಬೃಹದಾಕಾರವಾದ ದೋಣಿಯೊಂದನ್ನು ತಯಾರಿಸಲು ತನ್ನ ಸಹಚರರಿಗೆ ಸೂಚನೆ ನೀಡುತ್ತಾನೆ. ಆತನ ಸಹಚರರು ಕಾಡಿನಲ್ಲಿರುವ ಈ ವೃಕ್ಷರಾಜನೇ ಸುಂದರವಾದ ದೋಣಿ ತಯಾರಿಸಲು ತಕ್ಕುದಾದ ಮರ ಎಂದು ತೀರ್ಮಾನಿಸಿ ಅವನನ್ನು ಕಡಿಯಲು ಹೋಗುತ್ತಾರೆ. ವೃಕ್ಷರಾಜನ ಸ್ನೇಹಿತರಾದ ಪ್ರಾಣಿ, ಪಕ್ಷಿಗಳು ರಾಜನ ಸಹಚರರನ್ನು ವಿರೋಧಿಸುತ್ತವೆ. ಆದರೂ ಸಹಚರರ ಕೈ ಮೇಲಾಗಿ ವೃಕ್ಷರಾಜ ಸಂಹರಿಸಲ್ಪಡುತ್ತಾನೆ. ಒಂದು ಸುಂದರ ದೋಣಿಯಾಗಿ ರೂಪುಗೊಳ್ಳುತ್ತಾನೆ. ವೃಕ್ಷರಾಜನ ಆತ್ಮ ನೋವು ಸಂಕಟದಿಂದ ತತ್ತರಿಸುತ್ತದೆ. ಆ ನೋವಿನ ಪ್ರತಿಫಲನವೇ ಇಂದು ಮನುಷ್ಯ ಎದುರಿಸುತ್ತಿರುವ ಬಿಸಿಲು, ಬರ, ಕುಡಿಯಲೂ ನೀರಿಲ್ಲದ ಬದುಕು. ಈ ದಿನ ಜಗತ್ತು ಎದುರಿಸುತ್ತಿರುವ ಪ್ರಾಕೃತಿಕ ಅತಿವೃಷ್ಠಿ ಹಾಗೂ ಅನಾವೃಷ್ಠಿಗಳಿಗೆ ಮನುಷ್ಯನ ದುರಾಸೆಯೇ ಕಾರಣ ಮತ್ತು ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಹೊಣೆಗೇಡಿತನದಿಂದ ಬದುಕುತ್ತಿರುವುದೇ ಇಂದಿನ ಮಾನವನ ದುರಂತ. ಈ ಬಗ್ಗೆ ನಾಟಕ ಬೆಳಕು ಚೆಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net